ಬೆಳ್ತಂಗಡಿ: ತಾಲೂಕಿನ ಕೆಲವೆಡೇ ಬುಧವಾರವೂ ಭಾರೀ ಮಳೆಯಾಗಿದ್ದು ಚಾರ್ಮಾಡಿ, ನೆರಿಯ ಭಾಗಗಳಲ್ಲಿ ಭಾರೀ ಮಳೆಯಾದ ಪರಿಣಾಮ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿಯೂ ವಿಪರೀತ ಮಳೆಯಾದ ಪರಿಣಾಮ ಘಾಟ್ ರಸ್ತೆಯ 3 ನೇ ತಿರುವಿನಲ್ಲಿ ಗುಡ್ಡ ಕುಸಿತವುಂಟಾಗಿದೆಯಲ್ಲದೇ ಮರ ರಸ್ತೆಗೆ ಉರುಳಿ ಬಿದ್ದು ಸ್ವಲ್ಪ ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ವಾಹನ ಸವಾರರು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಂಗಳವಾರ ಕೂಡ ನೆರಿಯ, ಚಾರ್ಮಾಡಿ, ದಿಡುಪೆ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಸೇತುವೆಗಳು ಮಳುಗಡೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ನದಿಗಳಲ್ಲಿ ಭಾರೀ ನೀರು ಬರುತ್ತಿರುವುದರಿಂದ ನದಿ ತೀರದ ಜನ ಮನೆಯಲ್ಲಿ ವಾಸ ಮಾಡಲು ಭಯ ಪಡುವಂತಾಗಿದೆ.