ಆಗ್ರಾ: ಮರ್ಯಾದೆ ಹತ್ಯೆ, ಸಾಮೂಹಿಕ ಅತ್ಯಾಚಾರ, ದಲಿತ ಸಮುದಾಯಗಳ ಮೇಲಿನ ದೌರ್ಜನ್ಯ ಮುಂತಾದ ವಿಚಾರಗಳಿಗೆ ನಿರಂತರವಾಗಿ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದೆ.
ಸ್ಥಳೀಯವಾಗಿ ಆಯೋಜನೆಗೊಂಡಿದ್ದ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಗೆ ಮನಸೋಇಚ್ಚೆ ಥಳಿಸಲಾಗಿದೆ. ಈ ಅವಮಾನದಿಂದ ಮನನೊಂದ ದಲಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ದೂರು ನೀಡಿದ ಮೃತ ವ್ಯಕ್ತಿ ಪತ್ನಿ “ರವಿವಾರ ರಾತ್ರಿ 9 ಗಂಟೆಗೆ ನೆರೆಮನೆಯಲ್ಲಿ ನಡೆಯುತ್ತಿದ್ದ ರಾಮ್ ಲೀಲಾ ಕಾರ್ಯಕ್ರಮಕ್ಕೆ ತೆರಳಿದ್ದ ನನ್ನ ಪತಿ, ಖಾಲಿ ಕುರ್ಚಿಯ ಮೇಲೆ ಕುಳಿತಿದ್ದರು. ಅದನ್ನು ಸಂಘಟಕರಾದ ಕಾನ್ ಸ್ಟೇಬಲ್ ಬಹದ್ದೂರ್ ಹಾಗೂ ವಿಕ್ರಮ್ ಚೌಧರಿ ಎಂಬವರು ಅವರನ್ನು ಕುರ್ಚಿಯಿಂದ ಕೆಳಕ್ಕೆ ನೂಕಿದ್ದಾರೆ. ಸಂಘಟಕರ ಸೂಚನೆಯ ಮೇರೆಗೆ ಪೊಲೀಸರು ನನ್ನ ಪತಿಯನ್ನು ಬರ್ಬರವಾಗಿ ಥಳಿಸಿದ್ದು, ಅವರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ನಂತರ, ಆತನ ಕುತ್ತಿಗೆಯ ಸುತ್ತ ಟವೆಲ್ ಸುತ್ತಿ, ಕುರ್ಚಿಯಿಂದ ನೆಲದ ಮೇಲೆ ಉರುಳಿಸಿದ್ದಾರೆ. ಕೆಳಗೆ ಬಿದ್ದ ಅವರನ್ನು ಒದ್ದು, ಗುದ್ದಿದ್ದಾರೆ” ಎಂದು ಆರೋಪಿಸಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೃತನ ಕುಟುಂಬದ ಸದಸ್ಯರು ಹಾಗೂ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.