ಬೆಂಗಳೂರು: ಬಿಎಂಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಅ.08ರಂದು ಬೆಂಗಳೂರಿನ ಉಲ್ಲಾಳ ಉಪನಗರ ಕೆರೆ ಬಳಿ ಸಂಭವಿಸಿದೆ.
ಉಲ್ಲಾಳ ಸಮೀಪದ ರಿಂಗ್ ರಸ್ತೆಯಲ್ಲಿರುವ ಶೋರೂಂವೊಂದರಲ್ಲಿ ಹೆಚ್.ಆರ್.(ಮಾನವ ಸಂಪನ್ಮೂಲ ಅಧಿಕಾರಿ) ಆಗಿದ್ದ ಮೋನಿಕಾ(25) ಎಂದಿನಂತೆ ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸ್ಕೂಟರ್‌ಗೆ ಮುಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಮೋನಿಕಾ ಮೈಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರು ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
100 ಫೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದು ಬದಿಯ ರಸ್ತೆ ಕ್ಲೋಸ್ ಆಗಿತ್ತು. ರಸ್ತೆಯ ಒಂದೇ ಬದಿಯಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಈ ಅಪಘಾತದ ನಂತರ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮಂಡ್ಯ ಮೂಲದ ಮೃತ ಮೊನಿಕಾ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ಜತೆಗೆ ಸೊನ್ನೆನಾಹಳ್ಳಿಯ ಮಾರುತಿ ನಗರದಲ್ಲಿ ವಾಸವಾಗಿದ್ದರು.