‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ: “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ” ಎಂಬ ಹೆಗ್ಗಳಿಕೆ: ರಾಷ್ಟ್ರಮಟ್ಟದಲ್ಲಿ ಕುತ್ಲೂರು ಸದ್ದು ಮಾಡಿದ್ದು ಹೇಗೆ..?

ಬೆಳ್ತಂಗಡಿ : “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ಎಂಬ ಹೆಗ್ಗಳಿಕೆಯಲ್ಲಿ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ.

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವರ್ಷಂಪ್ರತಿ ನಡೆಯುವ “ಅತ್ಯುತ್ತಮ ಪ್ರವಾಸಿ ಹಳ್ಳಿಗಳು” ಇದರ “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ” ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆಪ್ಟೆಂಬರ್ 27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.

ಉಪ ರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಪ್ರವಾಸೋದ್ಯಮ ಇಲಾಖೆಯ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕುತ್ಲೂರು ಗ್ರಾಮಸ್ಥರ ಪರವಾಗಿ ಹರೀಶ್ ಡಿ ಸಾಲ್ಯಾನ್ ಮತ್ತು ಶಿವರಾಜ್ ಅಂಚನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕುತ್ಲೂರು ಸದ್ದು ಮಾಡಿದ್ದು ಹೇಗೆ..?

ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋಧ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬAಧ ಕೇಂದ್ರ ಪ್ರವಾಸೋಧ್ಯಮ ಮಂತ್ರಾಲಯ ಬೆಸ್ಟ್ ಟೂರಿಸಂ ವಿಲೇಜ್ ಕಾಂಫಿಟೀಶನ್-2024 ಅನ್ನು ಏರ್ಪಡಿಸಿತ್ತು. ಈ ಸ್ಪರ್ಧೆಗೆ ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ನಿವಾಸಿಗಳಾದ ಹರೀಶ್ ಡಿ. ಸಾಲ್ಯಾನ್, ಶಿವರಾಜ್ ಮತ್ತು ಸಂದೀಪ್ ಪೂಜಾರಿ ನಾರಾವಿ ಇವರು ಕುತ್ಲೂರು ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೋಬಗಿನ ಬಗ್ಗೆ ಒಂದು ಡ್ಯಾಕ್ಯುಮೆಂಟರಿ ಮಾಡಿ ಅದನ್ನು ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿದ್ದರು. ಇದರ ಬಗ್ಗೆ ಹಲವು ಸುತ್ತುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಪ್ರವಾಸೋಧ್ಯಮ ಮಂತ್ರಾಲಯ ಪಡೆದುಕೊಂಡಿತ್ತು. ದೇಶದ್ಯಾಂತ ನಡೆದ ಈ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಪ್ರವಾಸಿ ಹಳ್ಳಿಗಳು’ ಸ್ಪರ್ಧೆಯಲ್ಲಿ ಕುತ್ಲೂರು ಗ್ರಾಮ ಆಯ್ಕೆಯಾಗಿದೆ.

ಭವಿಷ್ಯದಲ್ಲಿ ಕುತ್ಲೂರು ಗ್ರಾಮಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.

error: Content is protected !!