ಮಂಗಳೂರು: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಅಪರಾಧಿ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ.
ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ (35), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಎಂಬವರು ಪ್ರಕರಣದ ಆರೋಪಿಗಳಿದ್ದು, ಇತ್ತೀಚೆಗೆ ಆರೋಪ ಕೂಡ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು, ಜೋನಸ್ ಸ್ಯಾಮ್ಸನ್ ಹಾಗೂ ವಿಕ್ಟೋರಿಯಾ ಮಥಾಯಿಸ್‌ಗೆ ಐಪಿಸಿ ಸೆಕ್ಷನ್ 302 (ಕೊಲೆ) ಹಾಗೂ ಸೆಕ್ಷನ್ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿದ್ದಾರೆ.
ಅಪರಾಧಿಗಳು ದಂಡ ತೆರಲು ತಪ್ಪಿದಲ್ಲಿ ಮತ್ತೆ ಒಂದು ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 201 (ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷ್ಯನಾಶ) ಮತ್ತು ಸೆಕ್ಷನ್ 34ರ ಅಡಿ ಏಳು ವರ್ಷಗಳ ಸಾದಾ ಸಜೆ ಮತ್ತು ತಲಾ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲವಾದಲ್ಲಿ ಮೂರು ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 392 (ಸುಲಿಗೆ) ಮತ್ತು 34ರ ಅಡಿಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ ಐದು ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ರಾಜುಗೆ ಐಪಿಸಿ ಸೆಕ್ಷನ್ 414ರ ಅಡಿ (ಕದ್ದ ಸ್ವತ್ತು ಬಚ್ಚಿಡಲು ನೆರವು) ಆರೂವರೆ ತಿಂಗಳು ಸಾದಾ ಸಜೆ ಮತ್ತು ಐದು ಸಾವಿರ ದಂಡ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ ಶ್ರೀಮತಿ ಶೆಟ್ಟಿಯವರ ತಾಯಿಗೆ 75 ಸಾವಿರ ರೂ ಪರಿಹಾರ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದಲೂ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.
ಘಟನೆಯ ವಿವರ: ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದು, ಜೊತೆಗೆ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಚಿಟ್ ಫಂಡ್‌ನಲ್ಲಿ ಜೋನಸ್ ಎರಡು ಸದಸ್ಯತ್ವ ಹೊಂದಿದ್ದ. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹೀಗಾಗಿ ಮಾಸಿಕ ಕಂತುಗಳ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
2019ರ ಮೇ 11ರಂದು ಬೆಳಗ್ಗೆ 9:15ಕ್ಕೆ ಹಣ ಕೇಳಲು ಶ್ರೀಮತಿ ಶೆಟ್ಟಿ ಆರೋಪಿ ಜೋನಸ್‌ನ ಮನೆಗೆ ತೆರಳಿದ್ದ. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ತುಂಡಿನಿAದ ಶ್ರೀಮತಿ ಶೆಟ್ಟಿ ಅವರ ತಲೆಗೆ ಹೊಡೆದಿದ್ದು, ಇದರಿಂದ ಪ್ರಜ್ಞಾಹೀನರಾದ ಅವರನ್ನು ಜೋನಸ್ ಮತ್ತಾತನ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಕುತ್ತಿಗೆ ಕೊಯ್ದು ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ವ್ಯಾನಿಟಿ ಬ್ಯಾಗ್, ಚಪ್ಪಲಿಯನ್ನು ಮನೆಯಲ್ಲಿ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದ.
ಮೂರು ದಿನದ ಬಳಿಕ ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು.
ಕದ್ರಿ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡು ಇನ್ಸ್ಪೆಕ್ಟರ್ ಶಾಂತರಾಂ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ 48 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ, 141 ದಾಖಲೆಗಳನ್ನು ಗುರುತಿಸಿ ಮೂವರ ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.