ಬೆಳ್ತಂಗಡಿ: ನಾಗರಿಕ ಅಭಿನಂದನಾ ಸಮಿತಿ ಕುವೆಟ್ಟು – ಓಡಿಲ್ನಾಳ ಇದರ ವತಿಯಿಂದ ಅ.02ರಂದು ಮದ್ದಡ್ಕ ಸಮುದಾಯ ಭವನದಲ್ಲಿ ‘ನಾಗರಿಕ ಅಭಿನಂದನಾ ಸಮಾರಂಭ’ ನಡೆಯಲಿದೆ ಎಂದು ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಸಂಪತ್.ಬಿ ಸುವರ್ಣ ಹೇಳಿದ್ದಾರೆ.
ಅವರು ಸೆ.24ರಂದು ಸಪ್ತವರ್ಣ ಪಾರ್ಟಿ ಹಾಲ್ ಸುವರ್ಣ ಆರ್ಕೇಡ್ ಸಂತೆಕಟ್ಟೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ “ಭಾರತೀಯ ಭೂಸೇನೆಯಲ್ಲಿ ಸುದೀರ್ಘ 24 ವರ್ಷ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸುತ್ತಿರುವ ಯೋಧ ಮಂಜುನಾಥ ಹಾಗೂ “ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ, ವಿಶ್ವನಾಥ ಗೌಡ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುತ್ತದೆ. ಪೂರ್ವಾಹ್ನ ಗಂಟೆ 9.00ಕ್ಕೆ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿನ್ನಿಗೋಳಿಯವರೆಗೆ ಯೋಧರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಮಾಡಿ, ಬಳಿಕ ಯೋಧ ಹಾಗೂ ಶಿಕ್ಷಕರನ್ನು ಸಭಾಂಗಣಕ್ಕೆ ಸ್ವಾಗತಿಸಿ ಅಭಿನಂದನಾ ಸಮಾರಂಭ ನಡೆಯಲಿದೆ” ಎಂದರು.
ಬರೋಡ ತುಳುಕೂಟ ಅಧ್ಯಕ್ಷರು ಶಶಿಧರ ಬಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದು, ಅಂಕಣಕಾರರಾದ ಆದರ್ಶ್ ಗೋಖಲೆ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ ಬಂಗೇರ, ಟಿ. ರಾಮ್ ಭಟ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಅಶ್ರಫ್ ಚಿಲಿಂಬಿ ಉಪಸ್ಥಿತರಿದ್ದರು.