ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಹೈಕೋರ್ಟ್ ಪ್ರಕಟಿಸಿದ ತೀರ್ಪಿನಲ್ಲಿ “ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿದ್ದಾರೆ. ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. 17ಂ ಅಡಿಯಲ್ಲಿ ಆದೇಶ ಸಮರ್ಪಕವಾಗಿದೆ. ಸಿಎಂ ಸಲ್ಲಿಸಿರುವ ಅರ್ಜಿ ವಜಾಗೊಳಿಸಿ ಆದೇಶಿಸಲಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನ ತಿರಸ್ಕರಿಸಲಾಗಿದೆ” ಎಂದಿದೆ.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಪ್ತ ಸಚಿವರು, ಕಾನೂನು ಸಲಹೆಗಾರರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸುತ್ತಿದ್ದಾರೆ. ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಕಮಿಷನರೇಟ್ ವ್ಯಾಪ್ತಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಎಸ್‌ಪಿ ಹಾಗೂ ಡಿಸಿಪಿಗಳಿಗೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಸೂಚಿಸಿದ್ದಾರೆ.