ಬಂಟ್ವಾಳ: ಕೆಸರು ಗದ್ದೆಯಲ್ಲಿ ಆಟವಾಡಿದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ: ಮಕ್ಕಳೊಂದಿಗೆ ಕೆಸರಿಗಿಳಿದ ಡಿಸಿ: ಮಕ್ಕಳಿಗೆ ಖುಷಿಯೋ ಖುಷಿ..!


ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಮಕ್ಕಳ ಪ್ರೀತಿಯ ಡಿಸಿ. ಇವರ ಹೆಸರು ಮಕ್ಕಳಿಗೆ ಗೊತ್ತೋ..? ಇಲ್ಲವೋ.. ಆದರೆ ಮಳೆ ಬಂದರೆ ಶಾಲೆಗೆ ಹೆಚ್ಚಾಗಿ ರಜೆ ಕೊಡುವ ಡಿಸಿ ಎಂದು ಎಲ್ಲರಿಗೂ ಗೊತ್ತು. ಇದಕ್ಕೆ ಸಾಕ್ಷಿಯಾಗಿ “ಡಿಸಿ ಗ್ ರಜೆ ಉಂಡ ಎಲ್ಲೆ” ಎಂದು ತೊದಲು ನುಡಿಯಲ್ಲಿ ಜಿಲ್ಲಾಧಿಕಾರಿಯವರ ಹೆಸರು ಹೇಳಿ ಮಳೆಯ ರಜೆ ವಿಚಾರಿಸಿದ ಮಗುವಿನ ಕೂಡ ಆಡಿಯೋ ವೈರಲ್ ಆಗಿತ್ತು. ಇದೀಗ ಕೆಸರು ಗದ್ದೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಆಟವಾಡಿ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಸೆ.23ರಂದು ನಡೆದ 6ನೇ ವರ್ಷದ ‘ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭಾಗವಹಿಸಿದರು. ಈ ವೇಳೆ ಡಿಸಿ ಮಕ್ಕಳೊಂದಿಗೆ ಕೆಸರಿಗೆ ಇಳಿದು ಮಕ್ಕಳೊಂದಿಗೆ ಆಟವಾಡಿದ್ದಾರೆ. ಡಿಸಿಯೊಂದಿಗೆ ಆಡಿದ ಮಕ್ಕಳಿಗೆ ಖುಷಿಯೋ ಖುಷಿ..!

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಬೆನ್ನೆಲುಬಾತ ರೈತ ಸಂತೋಷವಾಗಿದ್ದರೆ ಇಡೀ ಜಗತ್ತೇ ಸಂತಸಪಡುತ್ತದೆ. ಪ್ರತಿಯೊಬ್ಬರಿಗೆ ಆಹಾರ ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಹವಾಮಾನದ ಎಡರು-ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿ ಬೆಳೆದು ಬಂದಿರುವುದು ಗದ್ದೆಗಳಿಂದ” ಎಂದು ಹೇಳಿದರು.

error: Content is protected !!