ಆಂಧ್ರಪ್ರದೇಶ: ತಿರುಪತಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಈ ಹಿಂದೆ ಜಗಮೋಹನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರಕಾರ, ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡುಗಳನ್ನು ಗುಣಮಟ್ಟವಿಲ್ಲದ ಪದಾರ್ಥಗಳಿಂದ ತಯಾರಿಸಿದ್ದಲ್ಲದೆ, ಅದಕ್ಕೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ ಪಕ್ಷ, “ನಾಯ್ಡು ಅವರ ಆರೋಪ ದುರುದ್ದೇಶಪೂರಿತವಾಗಿದೆ. ನಾಯ್ಡು ರಾಜಕೀಯ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ” ಎಂದಿದೆ.
ವೈಎಸ್‌ಆರ್‌ಸಿಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ಬಾ ರೆಡ್ಡಿ ಪ್ರತಿಕ್ರಿಯೆ ನೀಡಿ “ನಾಯ್ಡು ಅವರ ಹೇಳಿಕೆಯಿಂದ ಪವಿತ್ರ ತಿರುಮಲದ ಪಾವಿತ್ರ‍್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಗೆ ಧಕ್ಕೆಯುಂಟಾಗಿದೆ” ಎಂದು ಆರೋಪಿಸಿದ್ದಾರೆ.