ಸಿನಿಮಾ ಎಂದರೆ ಬರೀ ಮನೋರಂಜನೆಯ ಅಲ್ಲ. ಕೆಲವು ಸಿನಿಮಾಗಳು ಕ್ರಾಂತಿಕಾರಿ ಬದಲಾವಣೆಗಳನ್ನೇ ಮಾಡುತ್ತದೆ. ಸಮಾಜವನ್ನು ಎಚ್ಚರಿಸುವ ಸಿನಿಮಾಗಳು, ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಹಳ ಸೂಕ್ಷö್ಮವಾಗಿ ತಿಳಿಸುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿದೆ. ಇತ್ತೇಚೆಗೆ ಬಿಡುಗಡೆಯಾಗಿ, ಸಕ್ಸಸ್ ಪಡೆದ ‘ಭೀಮಾ’ ಸಿನಿಮಾದಿಂದ ಸಾಮಾಜಿಕ ಬದಲಾವಣೆ ಆರಂಭವಾಗಿದೆ. ಈ ಮೂಲಕ ‘ಭೀಮ’ ಸಿನಿಮಾದ ಉದ್ದೇಶ ಪ್ರಗತಿಯಲ್ಲಿದೆ ಎಂಬುದು ಬೆಳಕಿಗೆ ಬಂದಿದೆ.
‘ಭೀಮ’ ಚಿತ್ರ ರಿಲೀಸ್ ಆದ ಬಳಿಕ ನಟ ದುನಿಯಾ ವಿಜಯ್ ಮತ್ತು ಪೊಲೀಸರು ಒಂದಷ್ಟು ಕಾರ್ಯಾಚರಣೆ ಮಾಡಿ ಡ್ರಗ್ ಪೆಡ್ಲರ್ ಗಳನ್ನು ಹಿಡಿದಿದ್ದಾರೆ. ಆದರೆ ಇಲ್ಲೊಬ್ಬ ತಂದೆಯೇ ‘ಭೀಮ’ ಚಿತ್ರ ನೋಡಿದ ಬಳಿಕ ತನ್ನ ಮಗನಿಗೆ ಡ್ರಗ್ಸ್ ಮಾರಿದವನನ್ನು ಹಿಡಿದುಕೊಟ್ಟಿದ್ದಾರೆ.
ಬೆಂಗಳೂರಿನ ವಾಲ್ಮೀಕಿ ನಗರದ ಇಕ್ಬಾಲ್ ಪಾಷಾ ಎಂಬುವರು ದುನಿಯಾ ವಿಜಯ್ ನಟಿಸಿರುವ ‘ಭೀಮ’ ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ 20 ವರ್ಷದ ಮಗನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮಗ ಯಾವಾಗಲೂ ಒಬ್ಬನೇ ಇರುತ್ತಾನೆ, ಸದಾ ಮತ್ತಿನಲ್ಲಿರುವಂತೆ ಇರುತ್ತಾನೆ, ಕಣ್ಣುಗಳ ಬಣ್ಣ ಬದಲಾಗಿರುತ್ತದೆ ಎಂಬಿತ್ಯಾದಿಗಳನ್ನು ಗಮನಿಸಿದ ಇಕ್ಬಾಲ್ ಪಾಷಾ ಮಗನ ಚಲನ ವಲನಗಳ ಮೇಲೆ ಕಣ್ಣಿಟ್ಟರು. ಡ್ರಗ್ ಸೇವನೆಯ ಬಗ್ಗೆ ಅನುಮಾನಗೊಂಡ ಅವರು ಕಾರ್ಯಾಚರಣೆ ಆರಂಭಿಸಿದರು.
ಮಗನಿಗೆ ಮಾತ್ರೆ ಹೇಗೆ ಸಿಗುತ್ತಿದೆ ಎಂದು ತಿಳಿಯಲು ವಾಲ್ಮಿಕಿ ದೇವಾಲಯದ ಬಳಿ ಒಬ್ಬರೇ ನಿಂತು ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬಳಿ ಮಾತ್ರೆಗಳಿಗಾಗಿ ವಿಚಾರಿಸಿದ್ದಾರೆ. ಆಗ ಒಬ್ಬ ಅಪ್ರಾಪ್ತ ಯುವಕ ‘ನನ್ನ ಬಳಿ ಮಾತ್ರೆ ಇದೆ ಅದನ್ನು ತೆಗೆದುಕೊಂಡರೆ ದೇಹದಾರ್ಢ್ಯ ಹೆಚ್ಚಾಗುತ್ತದೆ ಒಂದು ಮಾತ್ರೆಗೆ 100 ರೂಪಾಯಿ’ ಎಂದಿದ್ದಾರೆ. ಆಗ ಇಕ್ಬಾಲ್, 200 ಕೊಟ್ಟು ಎರಡು ಮಾತ್ರೆ ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ಮೆಡಿಕಲ್ ಶಾಪ್‌ಗೆ ತೆಗೆದುಕೊಂಡು ಹೋಗಿ ವಿಚಾರಿಸಿದಾಗ ಅದು ನೋವಿನ ಮಾತ್ರೆಯಾಗಿದ್ದು ಅದರಲ್ಲಿ ಮತ್ತು ಬರುವ ಅಂಶವಿರುವುದು ಗೊತ್ತಾಗಿದೆ. ಆ ಮಾತ್ರೆಯನ್ನು ನಶೆಗಾಗಿ ಬಳಸುವ ವಿಚಾರವೂ ತಿಳಿದುಕೊಂಡಿದ್ದಾರೆ. ಕೂಡಲೇ ಚಾಮರಾಜನಗರ ಪೊಲೀಸ್ ಠಾಣೆಗೆ ತೆರಳಿದ ಇಕ್ಬಾಲ್, ತನಗೆ ಮಾತ್ರೆ ಮಾರಾಟ ಮಾಡಿದ ಅಪ್ರಾಪ್ತ ವ್ಯಕ್ತಿ ಹಾಗೂ ಆತನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರ ತಿಳಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಆ ಅಪ್ರಾಪ್ತನನ್ನು ಬಂಧಿಸಿ, ಆತನಿಂದ 180 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.