ಮಂಗಳೂರು: ಪ್ರತೀಯೊಬ್ಬರು ಬದುಕಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಸಂಕಲ್ಪ ಮಾಡಿರುತ್ತಾರೆ. ಅದರಲ್ಲಿ ಅನೇಕರು ತಮಗಾಗಿ, ತಮ್ಮ ಹೆಸರು ಉಳಿಯೋದಕ್ಕಾಗಿ ಸಾಹಸ, ಸಾಧನೆ ಮಾಡುವವರಿದ್ದಾರೆ. ಆದರೆ ಇಲ್ಲೊಬ್ಬ ಶಿಕ್ಷಕ ತಾನು ಓದಿದ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಸೇವಾ ವೃತ್ತಿಯಲ್ಲೇ ಸಾಧನೆ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಬರೆಸಿಕೊಂಡಿದ್ದಲ್ಲದೆ ಸಿಕ್ಕ ಹಣವನ್ನು ತನ್ನ ಪ್ರೀತಿಯ ಸರಕಾರಿ ಶಾಲಾ ಅಭಿವೃದ್ಧಿಗೆ ನೀಡಿ ವಿಭಿನ್ನವಾಗಿ ಗಮನ ಸೆಳೆದಿದ್ದಾರೆ.
ಯೋಗ ಶಿಕ್ಷಕ ಕುಶಾಲಪ್ಪ ಗೌಡ ಅವರು ಬೆಳ್ತಂಗಡಿ ತಾಲೂಕಿನ ಮೊಗ್ರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಯೋಗದ ಮೂಲಕ ನಿಧಿ ಸಂಗ್ರಹಿಸಿದ್ದಾರೆ. 2024ರ ಜುಲೈ 22ರಿಂದ 23ವರೆಗೆ ಮಂಗಳೂರಿನ ಯೆನೆಪೋಯ ವೈದ್ಯಕೀಯ ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಕುಶಾಲಪ್ಪ ಗೌಡ ಅವರು ಯಾವುದೇ ವಿಶ್ರಾಂತಿ ಇಲ್ಲದೆ, ಉಪಹಾರ ಸೇವಿಸದೇ ನಿರಂತರ 25 ಗಂಟೆ 4 ನಿಮಿಷ 35 ಸೆಕೆಂಡ್ 2,693 ಮಂದಿಗೆ ಯೋಗ ತರಬೇತಿ ನೀಡಿದ್ದರು. ಈ ಮ್ಯಾರಾಥನ್ ಯೋಗ ಶಿಕ್ಷಣ ನಡೆಯುವ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕಾರಿಗಳು ಹಾಜರಿದ್ದಿದ್ದು, ಈ ದಾಖಲೆಯ ಯೋಗ ಶಿಕ್ಷಣವನ್ನು ಕಣ್ಣಾರೆ ಕಂಡ ಅಧಿಕಾರಿಗಳು ಎರಡು ದಾಖಲೆಗಳನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಿಸಿದ್ದಾರೆ. 25 ಗಂಟೆ ನಿರಂತರ ಯೋಗ ಶಿಕ್ಷಣ ನೀಡಿರುವುದಕ್ಕೆ ಕುಶಾಲಪ್ಪ ಗೌಡರಿಗೆ ಮತ್ತು ಯೆನೆಪೋಯ ಸಂಸ್ಥೆಗೆ ‘ಮೋಸ್ಟ್ ಹೆಲ್ತ್ ಕೇರ್ ಪ್ರೊಫೆಶನಲ್ ಯೋಗ ಸೆಷನ್ಸ್’ ದಾಖಲೆ ಬರೆಯಲಾಗಿದೆ.
ಕುಶಾಲಪ್ಪ ಗೌಡ ಅವರ ಭಗೀರಥ ಪ್ರಯತ್ನಕ್ಕೆ 2 ಲಕ್ಷ ರೂ ಹಣ ಲಭಿಸಿದ್ದು ಇದನ್ನು ಬೆಳ್ತಂಗಡಿಯ ಮೊಗ್ರು ಸರ್ಕಾರಿ ಶಾಲೆಗೆ ನೀಡಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡು, “ಯೋಗಭ್ಯಾಸದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಹೇಳಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ವೈಯಕ್ತಿಕ ಮತ್ತು ಸಂಸ್ಥೆಯ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ.