ಬೆಳ್ತಂಗಡಿ: ಶಿರ್ಲಾಲ್ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ಕಾರಣವಾದ ಘಟನೆ ಸೆ 03 ಮಂಗಳವಾರ ನಡೆದಿದೆ.ಶಿರ್ಲಾಲು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮ ಸಭೆಯು ಮಾರ್ಗದರ್ಶಿ ಅಧಿಕಾರಿ ಹೇಮಲತಾ ಹಾಗೂ ಪಂಚಾಯತ್ ಅಧ್ಯಕ್ಷೆ ಉಷಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅದರೆ ಸಭೆಯ ಪ್ರಾರಂಭದಲ್ಲೇ ಸ್ಥಳೀಯ ನಿವಾಸಿ ಕುಶಾಲಪ್ಪ ಎಂಬವರು ಕಳೆದ ಗ್ರಾಮ ಸಭೆಯ ವಿಚಾರವನ್ನು ಮುಂದಿಟ್ಟುಕೊಂಡು ಚರ್ಚೆಗೆ ಮುಂದಾದಾಗ ಈ ಬಗ್ಗೆ ಇನ್ನುಳಿದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಗ್ರಾಮ ಸಭೆಯನ್ನು ಕ್ರಮ ಪ್ರಕಾರವಾಗಿ ಮುಂದುವರಿಸುವಂತೆ ಪಟ್ಟು ಹಿಡಿದರು. ಈ ವೇಳೆ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ದೇವಸ್ಥಾನದ ಹಣದ ವಿಚಾರ ಸೇರಿದಂತೆ ಸಭೆಯಲ್ಲಿ ಗದ್ದಲ ಏರ್ಪಟ್ಟಿತ್ತಲ್ಲದೇ ನೂಕಾಟ, ತಳ್ಳಾಟ ನಡೆದಾಗ
ಪೊಲೀಸರು ಮಧ್ಯ ಪ್ರವೇಶಿಸಿದ ನಂತರ ಗ್ರಾಮ ಸಭೆಯು ಮುಂದುವರಿದಿದೆ. ಇನ್ನೊಂದು ಮಾಹಿತಿ ಪ್ರಕಾರ ನೂಕಾಟದ ವೇಳೆ ವಯಕ್ತಿಕ ನಿಂದನೆ ಮಾಡಿ ಹಲ್ಲೆಗೈಯಲಾಗಿದೆ ಎಂದು ಆರೋಪಿಸಿ ಕೆಲವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.