ಬೆಂಗಳೂರು , ವೇಶ್ಯಾವಟಿಕೆ ದಂಧೆ ಮೇಲೆ ಸಿಸಿಬಿ ದಾಳಿ ಬೆಳ್ತಂಗಡಿ ಮೂಲದ ಟೆಕ್ಕಿ ಸೇರಿದಂತೆ ಮೂವರ ಬಂಧನ:

 

 

ಬೆಂಗಳೂರು : ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿಯ ವೇಳೆ ಟೆಕ್ಕಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಹೊಂಗಸಂದ್ರದ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್, ಬೆಂಗಳೂರಿನ ಶಾಂತಿಪುರದ ಸೂರಜ್ ಶಾಹಜೀ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಬಂಧಿತರು.

ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಮಾಹಿತಿ ಮೇರೆಗೆ ಇತ್ತೀಚೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಪೊಲೀಸರು ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಆ.28 ರಂದು ದಾಳಿ ನಡೆಸಿ ಮೂವರನ್ನು ಬಂಧಿಸಿ 15 ಮತ್ತು 16 ವಯಸ್ಸಿನ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಹೊಂಗಸಂದ್ರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಪಡೆದು ಆ.28 ನೇ ಶುಕ್ರವಾರ ಸಿಸಿಬಿಯ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಚ್.ಎನ್.ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳದ ರಾಜ್ಯದವರು ಎನ್ನಲಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗಕ್ಕಾಗಿ ಬಂದಿದ್ದು ನಂತರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಂತೆಯೇ ಮನೆ ಬಾಡಿಗೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾ ದೇಶದ ಇಬ್ಬರು ಬಾಲಕಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದ್ದು, ಈ ವೇಳೆ ಗ್ರಾಹಕ ಬೆಳ್ತಂಗಡಿ ಮೂಲದ ಟೆಕ್ಕಿ ಕೂಡ ಸಿಕ್ಕಿಬಿದ್ದಿದ್ದ. ಆ ಮನೆಗೆ ಆತ ಎರಡನೆ ಬಾರಿ ಬಂದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಇನ್ನು ಆರಂಭದಲ್ಲಿ ತಾವು ಪಶ್ಚಿಮ ಬಂಗಾಳ ರಾಜ್ಯದವರು ಎಂದು ಸಂತ್ರಸ್ತೆಯರು ಹೇಳಿದ್ದರು. ಇದಕ್ಕೆ ಪೂರಕವಾದ ಆಧಾರ್ ಸೇರಿ ಇತರೆ ದಾಖಲೆಗಳನ್ನು ನೀಡಿದ್ದರು. ಆದರೆ ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾಗ ಆ ಬಾಲಕಿಯರು ಅಕ್ರಮ ಬಾಂಗ್ಲಾ ದೇಶದ ವಲಸಿಗರು ಎಂಬುದು ಖಚಿತವಾಗಿದೆ. ಪೋಕ್ಸೋ ಕಾಯ್ದೆಯಡಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ದಂಧೆಕೋರಳಾಗಿರುವ ಕರಿಷ್ಮಾಳ ಪೂರ್ವಾಪರ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!