“ಸಿರಿವಂತ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ: ಪ್ರಕರಣಗಳ ವಿಚಾರಣೆ ‘ಮುಂದೂಡಿಕೆ ಸಂಸ್ಕೃತಿ’ ಬದಲಿಸಬೇಕು: ಅತ್ಯಾಚಾರ ಪ್ರಕರಣಗಳ ತೀರ್ಮಾನ ಒಂದು ತಲೆಮಾರಿನ ನಂತರ ಹೊರಬರುತ್ತಿದೆ” ರಾಷ್ಟ್ರಪತಿ ದ್ರೌಪದಿ ಮುರ್ಮು ಕಳವಳ..!

ದೆಹಲಿ: ಅತ್ಯಾಚಾರಗಳಂಥ ಪ್ರಕರಣಗಳ ತೀರ್ಮಾನಗಳು ಒಂದು ತಲೆಮಾರಿನ ನಂತರ ಕೋರ್ಟ್ ಗಳಿಂದ ಹೊರಬರುತ್ತಿರುವುದಕ್ಕೆ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಕುರಿತು ನವದೆಹಲಿಯ ಭಾರತ ಮಂಟಪಂನಲ್ಲಿ ಸೆ.01ರಂದು ನಡೆದ 2 ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, “ಹೇಯ ಅಪರಾಧ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳಲ್ಲಿ ವಿಳಂಬ ನಿರ್ಧಾರಗಳಿಂದಾಗಿ ನ್ಯಾಯಾಲಯಗಳು ಸಂವೇದನೆ ಕಳೆದುಕೊಂಡಿವೆ. ನ್ಯಾಯಾಂಗ ವ್ಯವಸ್ಥೆಯ ‘ಮುಂದೂಡಿಕೆ ಪ್ರವೃತ್ತಿ’ಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ. ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಸವಾಲು. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಅನ್ನು ಹೆಚ್ಚೆಚ್ಚು ಆಯೋಜಿಸಬೇಕು. ಸಮಸ್ಯೆ ಬಗೆಹರಿಸಲು ಎಲ್ಲ ಪಾಲುದಾರರು ಭಾಗಿಯಾಗಿ ಆದ್ಯತೆಯಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಹೇಳಿದ್ದಾರೆ.

“ಗ್ರಾಮಗಳಲ್ಲಿ ನೆಲೆಸಿರುವ ಬಡ ಜನ ನ್ಯಾಯಾಲಯಗಳ ಮೊರೆ ಹೋಗಲು ಹೆದರುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ, ಸಿರಿವಂತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ ಅದೇ ಅಪರಾಧ ಕೃತ್ಯಗಳಿಂದ ತೊಂದರೆಗೀಡಾದ ಜನರು ತಾವೇ ಅಪರಾಧಗಳಲ್ಲಿ ಭಾಗಿಯಾದೆವೇನೋ ಎಂಬಂತೆ ಭಯದಲ್ಲಿ ಬದುಕುತ್ತಿದ್ದಾರೆ. ತಮ್ಮ ಮೇಲೆ ತೀವ್ರ ಒತ್ತಡವಿದ್ದಾಗ ಮಾತ್ರವೇ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ವಿರುದ್ಧ ಅನ್ಯಾಯ ನಡೆದರೂ ಮೌನವಾಗಿ ಸಹಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ, ತಾವು ನ್ಯಾಯಕ್ಕಾಗಿ ಹೋರಾಡಿದರೆ ಬದುಕು ಇನ್ನಷ್ಟು ಅಸಹನೀಯವಾಗಬಹುದೆಂಬ ಅವ್ಯಕ್ತ ಭಯ ಅವರಲ್ಲಿದೆ. ಈ ಜನರಿಗೆ ಗ್ರಾಮಗಳಿಂದ ನ್ಯಾಯಾಲಯಕ್ಕೆ ಹೋಗುವುದು ಎಂಬುದೇ ಬಹುದೊಡ್ಡ ಮಾನಸಿಕ ಮತ್ತು ಹಣಕಾಸಿನ ಒತ್ತಡವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ನ್ಯಾಯಾಲಯಗಳಲ್ಲಿನ ‘ಮುಂದೂಡಿಕೆ ಸಂಸ್ಕೃತಿ’ಯಿಂದ ಅದೆಷ್ಟು ತೊಂದರೆ ಅನುಭವಿಸಬಹುದು ಎಂಬುದು ಅನೇಕರ ಊಹೆಗೂ ನಿಲುಕದ ಸಂಗತಿ. ಹಾಗಾಗಿ, ಈ ಸಂಸ್ಕೃತಿಯನ್ನು ಬದಲಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲೇಬೇಕಿದೆ” ಎಂದು ಒತ್ತಿ ಹೇಳಿದ್ದಾರೆ.

error: Content is protected !!