ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿಯ ಸಾವಿನ ಕುರಿತು ರಾಜ್ಯ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆಗ್ರಹಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲು ಫೆ.02ರಂದು ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದಾಗ 17 ವರ್ಷದ ತಮ್ಮ ಮಗಳ ಮೇಲೆ ಯಡಿಯೂರಪ್ಪನವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ 2024ರ ಮಾರ್ಚ್ 15ರಂದು ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು. ಆದರೆ ದೂರುದಾರ ಮಹಿಳೆ ಮೇ 27ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಉಸಿರಾಟದ ತೊಂದರೆಯಿಂದಾಗಿ ಹುಳಿಮಾವು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಿತ್ರಾಣಗೊಂಡು ಸಾವನ್ನಪ್ಪಿದ್ದಾರೆ, ಮಹಿಳೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಮಹಿಳೆಯ ಸಾವು ಹಾಗೂ ಸಾವಿನ ನಂತರ ಮರಣೋತ್ತರ ಪರೀಕ್ಷೆ ನಡೆದಿರುವುದರ ಕುರಿತು ಅನುಮಾನಗಳಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ ರವಾನಿಸಿದ್ದಾರೆ.