ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ ಪಾರ್ಕಿಂಗ್ ನಿಯಮ: ಉಲ್ಲಂಘಿಸಿದರೆ ದಂಡಾಸ್ತ್ರ : ವಾಹನಗಳ ಚಕ್ರಕ್ಕೆ ಲಾಕ್..!: ಕ್ಷೇತ್ರಕ್ಕೆ ತೆರಳೋ ಮುನ್ನ ಹೊಸ ನಿಯಮ ತಿಳಿದುಕೊಳ್ಳಿ

ಸುಬ್ರಹ್ಮಣ್ಯ: ಪ್ರಸಿದ್ದ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಹೊಸ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಜಾರಿಗೊಳಿಸಲಾಗಿತ್ತು. ಇದೀಗ ಹೊಸ ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ದಂಡಾಸ್ತ್ರ ಪ್ರಯೋಗಿಸಲಾಗುತ್ತಿದೆ.

ಹೊಸ ನಿಯಮದ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ತಿಳಿಸಲಾಗಿರುವುದರಿಂದ ಕಳೆದ ಶನಿವಾರದಿಂದಲೇ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ. ಪೇಟೆಯ ಸುಗಮ ಸಂಚಾರದ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಸಂಚಾರ, ಪಾರ್ಕಿಂಗ್ ನಿಯಮ ಪಾಲಿಸಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಉಪ ನಿರೀಕ್ಷಕ ಕಾರ್ತಿಕ್ ಅವರು ತಿಳಿಸಿದ್ದಾರೆ.

ಹೇಗಿದೆ ಹೊಸ ನಿಯಮ?

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್‌ವರೆಗೆ ವನ್‌ವೇ ಪ್ರವೇಶ ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ವನ್‌ವೇ ನಿರ್ಗಮನ ನಿಯಮ ಮಾಡಲಾಗಿದೆ.
ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಒಂದು ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ಎಲ್ಲಾ ವಿಧದ ವಾಹನಗಳಿಗೆ 1 ಸಾವಿರ ರೂ ದಂಡ.
ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದರೆ ಎಲ್ಲ ವಿಧದ ವಾಹನಗಳಿಗೆ 500 ರೂ. ದಂಡ.
ಉಳಿದ ನಿಯಮ ಉಲ್ಲಂಘಟನೆಯಾದಲ್ಲಿ ಆಯಾ ಮಾನದಂಡಗಳ ಪ್ರಕಾರ ದಂಡ ವಿಧಿಸಲಾಗುತ್ತದೆ.
ಸಂಚಾರ, ಪಾರ್ಕಿಂಗ್ ನಿರ್ವಹಣೆಗೆ 7 ಗೃಹರಕ್ಷಕರು ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದು ಅವರು ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಮೇಲೆ ನಿಗಾ ಇರಿಸಲಿದ್ದಾರೆ.
ಪ್ರವಾಸಿಗರಿಗೆ ಮೊದಲ ಹಂತದ ತಿಳಿವಳಿಕೆ ನೀಡುವ ಸಲುವಾಗಿ ಏಕಮುಖ ಸಂಚಾರದ ಫಲಕ ಮತ್ತು ಸಿಬ್ಬಂದಿಯ ಕಾವಲು ಏರ್ಪಡಿಸಲಾಗಿದೆ.
ರೂಲ್ಸ್ ಬ್ರೇಕ್ ಮಾಡುವ ವಾಹನಗಳ ಚಕ್ರಕ್ಕೆ ಲಾಕ್ ಕೂಡ ಮಾಡಲಾಗುತ್ತದೆ.
ಸಾರ್ವಜನಿಕರೂ ಕೂಡ ಹೊಸ ನಿಯಮ ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಠಾಣೆಗೆ ಅಥವಾ ಸಿಬ್ಬಂದಿಗೆ ಮಾಹಿತಿ ನೀಡಬಹುದಾಗಿದೆ.
ಠಾಣೆಯಿಂದ ಸಿಸಿ ಕ್ಯಾಮರಾ ಮೂಲಕ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ.
ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ಆ ಮೂಲಕ ವಿಧಿಸಲಾಗುತ್ತದೆ.
ನಿಯಮ ಉಲ್ಲಂಘನೆ ಮಾಡಿ ಸ್ಥಳದಿಂದ ಹೋದ ವಾಹನಗಳ ಮಾಲೀಕರಿಗೆ ಕೋರ್ಟ್ ಅಥವಾ ಪೊಲೀಸ್ ಠಾಣೆಯಿಂದಲೂ ನೋಟೀಸ್ ಬರಲಿದೆ.

error: Content is protected !!