ಪ್ರಾಣ ಪಣಕ್ಕಿಟ್ಟು ದೇಹದ ತೂಕ ಇಳಿಸಿದ್ದ ವಿನೇಶ್ ಫೋಗಟ್: ‘ಮತ್ತೆ ಪ್ರಯತ್ನಪಟ್ಟಿದ್ದರೆ ಅವರು ಬದುಕುವ ಸಾಧ್ಯತೆ ಇರಲಿಲ್ಲ’: ಫೈನಲ್ ಪಂದ್ಯದ ಹಿಂದಿನ ರಾತ್ರಿಯ ಕರಾಳತೆ ವಿವರಿಸಿದ ಕೋಚ್

ನವದೆಹಲಿ: ಒಲಿಂಪಿಕ್ಸ್ ಕುಸ್ತಿ ಫೈನಲ್ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತಾರೆ, ಚಿನ್ನದ ಪದಕ ನಮಗೆ ಬಂದೇಬರುತ್ತದೆ ಎಂದು ಕಾದು ಕೂತಿದ್ದ ಭಾರತೀಯರಿಗೆ ವಿನೇಶ್ ಫೋಗಟ್ ಪಂದ್ಯದಿAದ ಹೊರಗೆ ಉಳಿದ ಘಟನೆ ತಾಳಲಾರದಷ್ಟು ನೋವುಂಟು ಮಾಡಿತ್ತು. ಹೇಗಾದರೂ ಮಾಡಿ ಅವರಿಗೆ ಒಂದೇ ಒಂದು ಅವಕಾಶ ನೀಡಬಹುದಾಗಿತ್ತು ಎಂಬುದು ಅನೇಕರ ಮಾತು. ಆದರೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ವಿನೇಶ್ ಫೋಗಟ್ ತಮ್ಮ ಪ್ರಾಣ ಪಣಕ್ಕಿಟ್ಟು ದೇಹದ ತೂಕ ಇಳಿಸಲು ಸಜ್ಜಾಗಿದ್ದರು ಎಂದು ಕೋಚ್ ವೋಲಾರ್ ಅಕೋಸ್ ವಿವರಿಸಿದ್ದಾರೆ.

ಫೈನಲ್ ಪಂದ್ಯದ ಹಿಂದಿನ ರಾತ್ರಿಯ ಕರಾಳತೆ ವಿವರಿಸಿದ ಕೋಚ್ “ಸೆಮಿಫೈನಲ್‌ನ ನಂತರ ವಿನೇಶ್ ದೇಹ ತೂಕ 2.7 ಕೆ.ಜಿಯಷ್ಟು ಹೆಚ್ಚಾಗಿತ್ತು. ಅಂದು ರಾತ್ರಿಯೇ ಅವರಿಗೆ ನಿರಂತರ ವ್ಯಾಯಾಮ ಮಾಡಿಸಿದ್ದೆವು. ಇದಾದ ಬಳಿಕ ತೂಕ ಕೊಂಚ ತಗ್ಗಿತಾದರೂ 1.5 ಕೆ.ಜಿ ಇನ್ನೂ ಹಾಗೆಯೇ ಉಳಿದಿತ್ತು. 50 ನಿಮಿಷಗಳ ಕಾಲ ಸ್ಟೀಮ್ ಬಾತ್ ಮಾಡಿಸಲಾಯಿತು. ಆದರೆ ಅವರ ದೇಹದಿಂದ ಒಂದೇ ಒಂದು ಹನಿ ಬೆವರು ಕೂಡಾ ಹೊರಬರಲಿಲ್ಲ. ಏಕೆಂದರೆ, ಅಷ್ಟು ಬೆವರು ದೇಹದಿಂದ ಅದಾಗಲೇ ಹೊರಹೋಗಿತ್ತು. ಇಲ್ಲಿಗೆ ನಿಲ್ಲದೇ, ಮಧ್ಯರಾತ್ರಿಯಿಂದ ಬೆಳಿಗ್ಗೆ 5:30ರ ವರೆಗೆ ವಿವಿಧ ಕಾರ್ಡಿಯೋ ಯಂತ್ರಗಳ ಮೂಲಕ ವರ್ಕೌಟ್ ಮಾಡಿದ್ದರು. ಕುಸ್ತಿ ಅಭ್ಯಾಸವನ್ನೂ ಮಾಡಿ ದೇಹ ದಂಡಿಸಿದರು. 3-4 ಗಂಟೆಗಳ ನಿರಂತರ ವ್ಯಾಯಾಮದ ಬಳಿಕ ಕೇವಲ 3-4 ನಿಮಿಷಗಳ ಕಾಲ ಮಾತ್ರ ವಿಶ್ರಾಂತಿ ಪಡೆದಿದ್ದರು. ಬಳಿಕ ಮತ್ತೆ ದೇಹ ದಂಡಿಸಲು ಮುಂದಾದಾಗ ಪ್ರಜ್ಞೆತಪ್ಪಿ ಬಿದ್ದರು. ಹೀಗಿದ್ದರೂ ಅವರನ್ನು ಮೇಲೆಬ್ಬಿಸಿ ಮತ್ತೆ ಒಂದು ಗಂಟೆ ಕಾಲ ಸ್ಟೀಮ್ ಬಾತ್ ಮಾಡಿಸಿದ್ದೆವು. ಇದರ ಬಳಿಕ ಏನೂ ಮಾಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ನಾವು ಮತ್ತೆ ಆಕೆಯಿಂದ ದೇಹ ದಂಡಿಸಲು ಯತ್ನಿಸಿದ್ದರೆ ಅವರು ಬದುಕುವ ಸಾಧ್ಯತೆ ಇರಲಿಲ್ಲ ಎಂದು ಕೋಚ್ ತಿಳಿಸಿದ್ದಾರೆ.

error: Content is protected !!