ಕೋಲ್ಕತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿದ್ದ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬAಧಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
“ನಾವು ನಮ್ಮ 78ನೇ ಸ್ವಾತಂತ್ರ‍್ಯ ವರ್ಷವನ್ನು ಆಚರಿಸುತ್ತಿರುವಾಗ ಜಾಗತಿಕವಾಗಿ ಒಂದು ದೇಶವಾಗಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ತಮ್ಮ ದೇಶದಲ್ಲಿ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ ಎಂಬ ಭಯಾನಕ ವಾಸ್ತವವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಈ ಅಮಾನವೀಯ ಕೃತ್ಯಗಳನ್ನು ಮಾಡುವ ಜನರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ಇಂದಿಗೂ, ಇದರಲ್ಲಿ ಬಲಿಪಶುವಾಗಿರುವುದಕ್ಕೆ ಮಹಿಳೆಯನ್ನು ದೂಷಿಸಲಾಗುತ್ತಿದೆ” ಎಂದು ನಟಿ ಕೃತಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಟ ಹೃತಿಕ್ ರೋಷನ್ ತಮ್ಮ ಎಕ್ಸ್ ಖಾತೆಯಲ್ಲಿ, “ನಾವೆಲ್ಲರೂ ಸಮಾನವಾಗಿ ಸುರಕ್ಷಿತರೆಂದು ಭಾವಿಸುವ ಸಮಾಜವನ್ನು ನಿರ್ಮಿಸಬೇಕು. ಆದರೆ ಅದಕ್ಕೆ ಹಲವು ವರ್ಷಗಳು ಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ತಲೆಮಾರು ಉತ್ತಮವಾಗಿರುತ್ತದೆ. ಇದೀಗ ಇಂತಹ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವುದು ನ್ಯಾಯವಾಗಿದೆ. ಮತ್ತು ಅದನ್ನು ಮಾಡಲು ಇರುವ ಏಕೈಕ ಮಾರ್ಗವೆಂದರೆ ಅಂತಹ ಅಪರಾಧಿಗಳಿಗೆ ಹಾಡುಹಗಲಿನಲ್ಲೇ ಕಠಿಣ ಶಿಕ್ಷೆ ನೀಡುವುದು. ತಾನು ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆಕೆಯ ಕುಟುಂಬದೊAದಿಗೆ ನಿಲ್ಲುತ್ತೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ನಟ ಆಯುಷ್ಮಾನ್ ಖುರಾನಾ ಅವರು ಕಾಶ್ ಮೈ ಭಿ ಲಡ್ಕಾ ಹೋತಿ (ನಾನು ಹುಡುಗನಾಗಬೇಕೆಂದು ಬಯಸುತ್ತೇನೆ) ಎಂಬ ಭಾವನಾತ್ಮಕ ಕವಿತೆಯನ್ನು ಬರೆದು ಈ ಮೂಲಕ ಅವರು, “ನಾನು ಹುಡುಗನಾಗಬೇಕೆಂದು ಬಯಸುತ್ತೇನೆ. ಯಾಕೆಂದರೆ ನಾನು ಬಾಗಿಲನ್ನು ಲಾಕ್ ಮಾಡದೆ ಮಲಗಬಹುದು. ನಿರಾತಂಕವಾಗಿ ಎಲ್ಲಿ ಬೇಕಾದರೂ ಓಡಾಡಬಹುದು, ಹಾರಾಡಬಹುದು, ರಾತ್ರಿಯಿಡೀ ಸ್ನೇಹಿತರೊಂದಿಗೆ ತಿರುಗಾಡಬಹುದು. ಆದರೆ ಈ ಸ್ವಾತಂತ್ರ‍್ಯ ಮಹಿಳೆಯರಿಗೆ ಇಲ್ಲವಲ್ಲ’’ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.
ನಟಿ ಕರೀನಾ ಕಪೂರ್ ಖಾನ್ ಅವರು ಈ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ, ‘12 ವರ್ಷಗಳ ನಂತರ; ಅದೇ ಕಥೆ; ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ನಟಿ ಜೆನಿಲಿಯಾ ದೇಶ್‌ಮುಖ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ “ರಾಕ್ಷಸರನ್ನು ಗಲ್ಲಿಗೇರಿಸಬೇಕಾಗಿದೆ. ಬಲಿಪಶು ಅನುಭವಿಸಿದ್ದನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಸೆಮಿನಾರ್ ಹಾಲ್ ನಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಮಹಿಳೆ, ಇಂತಹ ಘೋರ ಭಯಾನಕತೆಯನ್ನು ಎದುರಿಸಿದಳು. ಅವಳ ಕುಟುಂಬದವರು ಮತ್ತು ಪ್ರೀತಿಪಾತ್ರರು ಈ ದುರಂತವನ್ನು ಹೇಗೆ ಎದುರಿಸುತ್ತಿದ್ದಾರೆಂದು ಊಹಿಸಲು ಸಹ ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.