ಕಾರವಾರ: ಕೋಡಿಭಾಗ್ ಸೇತುವೆ ಕಾಳಿ ನದಿಗೆ ಬಿದ್ದು ತಮಿಳುನಾಡು ಮೂಲದ ಲಾರಿ ನದಿ ಪಾಲಾದ ಘಟನೆ ಆ.07ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
41 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕೋಡಿಭಾಗ್ ಸೇತುವೆ ಮಧ್ಯರಾತ್ರಿ ಏಕಾಏಕಿ ಕುಸಿದು ಬಿದ್ದಿತು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಅದೃಷ್ಟವಶಾತ್, ಲಾರಿ ಚಾಲಕನ ಪ್ರಾಣ ಉಳಿದಿದೆ.
ಸೇತುವೆ ಕುಸಿದ ಬೆನ್ನಲ್ಲೆ ಟ್ರಕ್ ಕೂಡ ನದಿಗೆ ಬಿದ್ದಿದೆ. ಟ್ರಕ್ ಸಂಪೂರ್ಣ ಮುಳುಗಡೆಯಾಗಿದ್ದು, ಕ್ಯಾಬಿನ್ ಮಾತ್ರ ನೀರಿನಲ್ಲಿ ಕಾಣತೊಡಗಿತ್ತು. ಈ ವೇಳೆ ಗಾಯಗೊಂಡಿದ್ದ ಚಾಲಕ ನೀರಿನಿಂದ ಹೊರಬಂದು ಟ್ರಕ್ ಕ್ಯಾಬಿನ್ ಏರಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದ. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿ ಆಗಮಿಸಿದ ಪೊಲೀಸರು ಹಾಗೂ ಮೀನುಗಾರರು ದೋಣಿಯನ್ನು ಕೊಂಡೊಯ್ದು, ಆತನನ್ನು ರಕ್ಷಣೆ ಮಾಡಿ, ದಡಕ್ಕೆ ಕರೆ ತಂದು ಕೂಡಲೇ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಳೆಯಿಂದಾಗಿ ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಸವಾಲಿನ ಮಧ್ಯೆಯೂ ಕರಾವಳಿ ಕಾವಲು ಪಡೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಕಾರ್ಯಾಚರಣೆ ಮುಂದುವರೆದಿದೆ. ಸೇತುವೆಯಿಂದ ಕಾಳಿ ನದಿಗೆ ಇನ್ನಷ್ಟು ವಾಹನಗಳು ಏನಾದರೂ ಬಿದ್ದಿವೆಯೇ ಎಂಬ ಬಗ್ಗೆ ಶೋಧ ನಡೆಯುತ್ತಿದೆ.
ಹೊಸ ಸೇತುವೆಯಲ್ಲಿಯೂ ಸಂಚಾರ ಬಂದ್: ಸದ್ಯ ಐಆರ್‌ಬಿ ಕಂಪನಿಯಿAದ ನಿರ್ಮಾಣ ಮಾಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಎನ್‌ಹೆಚ್‌ಎಐಗೆ ಆದೇಶ ನೀಡಿದ್ದಾರೆ. ಸೇತುವೆಯ ಗುಣಮಟ್ಟದ ಬಗ್ಗೆ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ. ಸೇತುವೆ ಗುಣಮಟ್ಟದ ವರದಿ ಬರುವವರೆಗೂ ಹೊಸ ಸೇತುವೆಯಲ್ಲಿಯೂ ಸಂಚಾರವನ್ನು ನಿಷೇಧ ಮಾಡಲಾಗಿದೆ. ಇದರಿಂದ ಸದ್ಯ ಕಾರವಾರದಿಂದ ಗೋವಾಕ್ಕೆ ಸಂಚಾರ ಸಂಪೂರ್ಣ ಬಂದ್ ಆಗಿದೆ.