ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದರೂ ಸಮರ್ಪಕ ಅವ್ಯವಸ್ಥಿತ ಕಾಮಗಾರಿಯಿಂದ ಈಗಾಗಲೇ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ನರಕ ಯಾತನೇ ಅನುಭವಿಸುತ್ತಿರುವ ನಡುವೆಯೇ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸಂಬಳ ನೀಡಿಲ್ಲ ಎಂದು ಕಾರ್ಮಿಕರೆಲ್ಲ ಗಲಾಟೆಗೆ ಮುಂದಾದ ಘಟನೆ ಗುರುವಾಯನಕೆರೆ ಬಳಿಯ ಡಿ.ಪಿ. ಜೈನ್ ಪ್ಲಾಂಟೇಶನ್ ನಲ್ಲಿ ಶುಕ್ರವಾರ ನಡೆದಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆಯನ್ನು ಡಿ.ಪಿ. ಜೈನ್ ಸಂಸ್ಥೆ ವಹಿಸಿಕೊಂಡಿದ್ದು ಇದರ ಕಾರ್ಮಿಕರು ಕಳೆದ ಕೆಲವು ತಿಂಗಳುಗಳಿಂದ ಕೆಲಸ ನಿರ್ವಹಿಸುತ್ತಿದ್ಸರು. ಅದರೆ ಕಳೆದ ಎರಡು ತಿಂಗಳಿನಿಂದ ಸುಮಾರು 30 ರಿಂದ ,40 ಮಂದಿ ಅಸ್ಸಾಂ ಮೂಲದ ಕಾರ್ಮಿಕರಿಗೆ ಸಂಬಳ ನೀಡಲು ಬಾಕಿ ಇದ್ದು ಅವರೆಲ್ಲ ಡಿ.ಪಿ. ಜೈನ್ ಕಛೇರಿಯಲ್ಲಿ ಸಂಬಳ ನೀಡದಿದ್ದಲ್ಲಿ ಕೆಲಸ ಮಾಡುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಕೊನೆಗೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅದಲ್ಲದೇ ಶನಿವಾರ ಸಂಜೆಯೊಳಗೆ ಡಿ.ಪಿ. ಜೈನ್ ಸಂಸ್ಥೆಯ ಅಧಿಕಾರಿಗಳು ಸಂಬಳ ನೀಡುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈಗಾಗಲೇ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು ಕಾರ್ಮಿಕರ ಗಲಾಟೆಯಿಂದ ಮುಂದೆ ಯಾವ ರೀತಿ ಕೆಲಸ ನಡೆಯಬಹುದು ಎಂಬ ಚಿಂತೆ ಸಾರ್ವಜನಿಕರಲ್ಲಿ ಮೂಡಿದೆ.