ಬೆಂಗಳೂರು: ಕರಾವಳಿಗರ ಜಾನಪದ ಕ್ರೀಡೆ, ಲಕ್ಷಾಂತರ ಅಭಿಮಾನಿಗಳ ಕಂಬಳಕ್ಕೆ 2023-24ನೇ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡದ್ದನ್ನು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನಿಸಿದ್ದಾರೆ.
ಜಾನಪದ ಕ್ರೀಡೆ ಕಂಬಳ ಸಂಘಟಕರಿಗೆ 2023-24ನೇ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಸಂಘಕರಿಗೆ ಸಮಸ್ಯೆ ಆಗಿದೆ. ರಾಜ್ಯದ 20 ಕಡೆ ಕಂಬಳ ನಡೆದಿದೆ. ಸದಾನಂದಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಸರ್ಕಾರ ಯಾಕೆ ಅನುದಾನ ಬಿಡುಗಡೆ ಮಾಡಿಲ್ಲ? ಲಕ್ಷಾಂತರ ಜನ ಈ ಕಂಬಳವನ್ನೇ ನೆಚ್ಚಿಕೊಂಡಿದ್ದಾರೆ. ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲು ಇಡಬೇಕಿತ್ತು. ಕಳೆದ ವರ್ಷದ ಕಂಬಳದ ಅನುದಾನವನ್ನೂ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಹೆಚ್.ಕೆ ಪಾಟೀಲ್ ಡಿಸಿ ಅವರು ಬಿಲ್ ತಯಾರಿಸಿ ಮಾರ್ಚ್ 20ರ ಒಳಗೆ ಕಳಿಸಿದ್ದಾರೆ. ಬಿಲ್ ಕಳಿಸೋದು ತಡವಾಗಿ ಅನುದಾನ ಬಿಡುಗಡೆ ಆಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುತ್ತೇವೆ. ಕಳೆದ ವರ್ಷದ 2 ಕಂಬಳಕ್ಕೆ 5 ಮತ್ತು 10 ಲಕ್ಷ ರೂ. ಅನುದಾನ ನೀಡಿದ್ದೇವೆ. ಈ ಅಧಿವೇಶನ ಮುಗಿಯುವ ಒಳಗೆ ಹಣ ಬಿಡುಗಡೆ ಮಾಡ್ತೀವಿ. 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯುವ ಕಂಬಳಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ. ಕ್ರೀಡೆಯೊಳಗೆ ನಾವು ರಾಜಕೀಯ ಮಾಡೋದಿಲ್ಲ ಎಂದು ಭರವಸೆ ನೀಡಿದ್ದಾರೆ.