ಶಿರೂರು: ಮತ್ತಷ್ಟು ಬಾಯ್ತೆರೆಯುತ್ತಿದೆ ಗುಡ್ಡ..!: ಕುಸಿಯುವ ಭೀತಿಯಲ್ಲಿ ಅಕ್ಕಪಕ್ಕದ ಗುಡ್ಡಗಳು: ಅಪಾಯಕಾರಿಯಾಗುತ್ತಿದೆ ಕಾರ್ಯಾಚರಣೆ..!

 


ಕಾರವಾರ: ಅಂಕೋಲಾದ ಶಿರೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದಿರುವ ಬೃಹತ್ ಗುಡ್ಡ ಈಗ ಮತ್ತಷ್ಟು ಅಪಾಯಕಾರಿಯಾಗುತ್ತಿದೆ. ಈಗಾಗಲೆ ದೊಡ್ಡ ಅನಾಹುತ ಸಂಭವಿಸಿದ್ದು ಕುಸಿದಿರುವ ಗುಡ್ಡದ ಮಣ್ಣುಗಳಡಿ ಸಿಲುಕಿರುವವರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಆದರೆ ಸಧ್ಯಕ್ಕೆ ಕಾರ್ಯಾಚರಣೆಯೇ ಭಾರೀ ಅಪಾಯವಾಗುತ್ತಿದೆ.

ಹೆದ್ದಾರಿ ಮೇಲೆ ಬಿದ್ದ ಬೃಹತ್ ಪ್ರಮಾಣದ ಮಣ್ಣನ್ನು 8ಕ್ಕೂ ಹೆಚ್ಚು ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಿಕೊಂಡು ಹೆದ್ದಾರಿಯ ಎರಡೂ ಬದಿಯಿಂದ ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಮತ್ತಷ್ಟು ಗುಡ್ಡ ಬಿರುಕು ಬಿಟ್ಟಿದ್ದು, ಅಕ್ಕಪಕ್ಕದ ಗುಡ್ಡಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ. ಇದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರ ಆತಂಕಕ್ಕೂ ಕಾರಣವಾಗಿದೆ. ಪಕ್ಕದಲ್ಲೂ ಬೃಹತ್ ಗುಡ್ಡ ಬೀಳುವ ಸಾಧ್ಯತೆ ಇದ್ದುದರಿಂದ ಅದರ ತೆರವಿನ ಬಳಿಕವೇ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ನದಿಯಲ್ಲಿ ನಾಪತ್ತೆಯಾದವರಿಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಬೋಟ್‌ಗಳ ಮೂಲಕ ನಿರಂತರವಾಗಿ ಹುಡುಕಾಟ ಮುಂದುವರಿಸಿವೆ. ಮಣ್ಣು ಕುಸಿದ ಪ್ರದೇಶದಲ್ಲಿದ್ದ ಎರಡು ವಾಹನಗಳನ್ನು ತೆರವು ಮಾಡಲಾಗಿದೆ. ಉಳಿದಂತೆ, ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ತೇಲಿಕೊಂಡು ಹೋಗಿದ್ದು, ಸ್ಥಳಕ್ಕೆ ಬಿಪಿಸಿಎಲ್ ಸೌತ್ ಎಂಡ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

error: Content is protected !!