ಬೆಂಗಳೂರು: ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಎಂಬ ಹಾಡಿನ ಹಾಸ್ಯಮಯ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್ ಎಂಬಾತನಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಡಿಯೋವೊಂದರ ಮೇಲೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ವಿಕಾಸ್‍ನನ್ನು ಬೈಯಪ್ಪನಹಳ್ಳಿ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿದ್ದು, ಡ್ರಗ್ಸ್ ಬಗೆಗಿನ ಪ್ರಚೋದನಾತ್ಮಕ ಹೇಳಿಕೆಯ ವಿಡಿಯೋ ಡಿಲೀಟ್ ಮಾಡಬೇಕು ಎಂದಿದ್ದಾರೆ. ಅಲ್ಲದೆ ವಿಡಿಯೋ ಡಿಲಿಟ್ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖಾಕಿ ಎಚ್ಚರಿಕೆ ನೀಡಿದ ಬೆನ್ನಲ್ಲೆ ವಿಕಾಸ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.