ಹುಬ್ಬಳ್ಳಿ : ಅಪರಾಧ ಚಟುವಟಿಕೆಗಳು, ನಿರಂತರ ಪ್ರತಿಭಟನೆಗಳು ನಡೆದಿದ್ದ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕಾನೂನು ಸುವ್ಯವ್ಥೆ ಸರಿಯಲ್ಲ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಇದೀಗ ಇಲ್ಲಿನ ಪೊಲೀಸ್ ಆಯುಕ್ತರು ಬದಲಾವಣೆಗೊಂಡಿದ್ದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ನೇಮಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ 3 ಕೊಲೆಗಳಾದವು. ಇಬ್ಬರು ಯುವತಿಯರು ಮತ್ತು ಓರ್ವ ಯುವಕನ ಕೊಲೆಯಾಗಿದ್ದು ಇದರಿಂದ ಭಯಗೊಂಡ ಹುಬ್ಬಳ್ಳಿ ಜನತೆ ಮಹಾನಗರದ ಕಾನೂನು ಸುವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಇದೀಗ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಎಐಜಿಪಿಯಾಗಿ ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಲು ದಕ್ಷ ಪೊಲೀಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ನೇಮಕ ಮಾಡಿ ಆದೇಶಿಸಿದೆ.