ಸಾಂದರ್ಭಿಕ ಚಿತ್ರ
ತಮಿಳುನಾಡು : ನಕಲಿ ಮದ್ಯ ಸೇವಿಸಿ 33ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಸಂಭವಿಸಿದೆ.
ದಿನಗೂಲಿ ಕಾರ್ಮಿಕರು ಸೇರಿ 60ಕ್ಕೂ ಹೆಚ್ಚಿನ ಜನರು ಜೂ.18ರ ರಾತ್ರಿ ಪ್ಯಾಕೆಟ್‌ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ತಲುಪಿದ ನಂತರ ಮದ್ಯ ಸೇವಿಸಿದ ಹೆಚ್ಚಿನವರಲ್ಲಿ ತಲೆ ತಿರುಗುವಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ.
ಸ್ಥಳೀಯ ಆಸ್ಪತ್ರೆ ಹಾಗೂ ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾದವರಲ್ಲಿ 20 ಜನರು ಅಸ್ವಸ್ಥರಾಗಿದ್ದು ಈ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ. ಜೂ.20ಕ್ಕೆ ಸಾವಿನ ಸಂಖ್ಯೆ 33ಕ್ಕೇ ಏರಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ತಮಿಳುನಾಡನ್ನು ಬೆಚ್ಚಿ ಬೀಳಿಸಿರುವ ಈ ಘಟನೆ ಬಳಿಕ ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾದವತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎಂಎಸ್ ಪ್ರಶಾಂತ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಆದೇಶ ಮಾಡಿದೆ.