ಮಚ್ಚಿನ: ಮಗುವಿನ ಪ್ರಾಣ ಉಳಿಸಲು ಆ್ಯಂಬುಲೆನ್ಸ್ ನಲ್ಲಿ ನಿರಂತರ 14 ಗಂಟೆ ಡ್ರೈವಿಂಗ್: ಮಂಗಳೂರು ಟು ಚೆನ್ನೈ, 1640 ಕಿ.ಮೀ ಪ್ರಯಾಣ: ಜೀವ ರಕ್ಷಕ ದೀಕ್ಷಿತ್‌ಗೆ ಸಾರ್ವಜನಿಕರಿಂದ ಭಾರೀ ಶ್ಲಾಘನೆ

ಮಚ್ಚಿನ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 6 ವರ್ಷದ ಮಗುವಿನ ಪ್ರಾಣ ಕಾಪಾಡಲು ಆ್ಯಂಬುಲೆನ್ಸ್ ಚಾಲಕರೊಬ್ಬರು ನಿರಂತರ 14 ಗಂಟೆ ಆ್ಯಂಬುಲೆನ್ಸ್ ಚಲಾಯಿಸಿ ಮಗುವನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ ಸಾರ್ವಜನಿಕರಿಂದ ಭಾರೀ ಶ್ಲಾಘನೆ ಪಡೆದ ಘಟನೆ ಜೂ.16ರಂದು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ನಡೆದಿದೆ.

6 ವರ್ಷದ ಆಯುಷ್ ಎಂಬ ಮಗುವಿಗೆ ತುರ್ತು ಚಿಕಿತ್ಸೆ ನೀಡಲು ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ವೀರಕೇಸರಿ ಆ್ಯಂಬುಲೆನ್ಸ್ ಮೂಲಕ ಹೊರಟ ಚಾಲಕ ದೀಕ್ಷಿತ್ 5 ಗಂಟೆಯಲ್ಲಿ ಬೆಂಗಳೂರು ತಲುಪಿದ್ದಾರೆ. ಆದರೆ ಬೆಂಗಳೂರಿನ ಆಸ್ಪತ್ರೆಯಿಂದ ಮಗುವನ್ನು ಪಾಂಡಿಚೇರಿಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದು ಮತ್ತೆ ಬೆಂಗಳೂರಿನಿಂದ ಮಗುವನ್ನು ಪಾಂಡಿಚೇರಿಗೆ ಆ್ಯಂಬುಲೆನ್ಸ್ ಮೂಲಕ ಕರೆತಂದಿದ್ದಾರೆ. ಅಲ್ಲಿಯೂ ಮಗುವಿಗೆ ತಾಂತ್ರಿಕ ದೋಷದಿಂದ ಚಿಕಿತ್ಸೆ ನೀಡಲಾಗದ ಕಾರಣ ಮತ್ತೆ ಅಲ್ಲಿಂದ ಚೆನ್ನೈ ಆಸ್ಪತ್ರೆಗೆ ಮಗುವನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ. ಇದೀಗ ಮಗುವಿಗೆ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 ಆ್ಯಂಬುಲೆನ್ಸ್ ಚಾಲಕ ದೀಕ್ಷಿತ್ 

ಒಬ್ಬರೇ ಚಾಲಕರಾಗಿ 1640 ಕಿ.ಮೀ ದೂರವನ್ನು 14 ಗಂಟೆಗಳಲ್ಲಿ ತಲುಪಿದ ಜೀವ ರಕ್ಷಕ ದೀಕ್ಷಿತ್‌ಗೆ ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಊರಿಗೆ ವಾಪಾಸ್ ಆಗಿರುವ ದೀಕ್ಷಿತ್ ಅವರನ್ನು ವೀರಕೇಸರಿ ಫ್ರೆಂಡ್ಸ್ (ರಿ) ತಂಡ ಹಾಗೂ ಊರವರು ಅಭಿನಂದಿಸಿದ್ದಾರೆ. ಅನೇಕರು ತಮ್ಮ ವಾಟ್ಸಾಪ್ ಸ್ಟೇಟಸ್ ಮೂಲಕ ಮಗುವಿನ ಪ್ರಾಣ ಉಳಿಸಲು ತಮ್ಮ ಜೀವ ಮುಡಿಪಾಗಿಟ್ಟ ದೀಕ್ಷಿತ್ ಅವರಿಗೆ ಶ್ರೀ ದೇವರು ಆಯುರಾರೋಗ್ಯ ನೀಡಲಿ ಎಂದು ಶುಭ ಹಾರೈಸಿದ್ದಾರೆ.

error: Content is protected !!