ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬೆಳ್ತಂಗಡಿ ಯುವ ಮೋರ್ಚಾ ಅಧ್ಯಕ್ಚ ಶಶಿರಾಜ್ ಶೆಟ್ಟಿಗೆ ಜಾಮೀನು ಮಂಜೂರು ಗೊಂಡಿದೆ. ಅದಲ್ಲದೇ ನಾಪತ್ತೆಯಾಗಿದ್ದ ಮತ್ತೊಬ್ಬ ಆರೋಪಿ ಪ್ರಮೋದ್ ದಿಡುಪೆಗೂ ಜೂ.13 ರಂದು ಷರತ್ತು ಬದ್ಧ ಜಾಮೀನು ಮಂಜೂರುಗೊಂಡಿದೆ.
ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ಬಿಜೆಪಿ ಮಂಡಲ ಎಸ್ಟಿ ಮೋರ್ಚಾದ ಅಧ್ಯಕ್ಷ ಕಳೆಂಜ ಗ್ರಾಮದ ನಿವಾಸಿ ರಾಜೇಶ್ ಎಮ್. ಅವರಿಗೆ ಜೂ.14ರಂದು ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ 2 ಪ್ರಕರಣದಲ್ಲೂ ಜಯಗಳಿಸಿದ ಬಿಜೆಪೆ ಇದೀಗ ಸಂಸತಗೊಂಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸರಾವ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಅವರು, ‘ಕಾಂಗ್ರೆಸ್ ನಾಯಕರ ದ್ವೇಷ ರಾಜಕೀಯದ ಫಲಶ್ರುತಿಯಾಗಿ ವಿವಿಧ ರೀತಿಯಲ್ಲಿ ಸುಳ್ಳು ಪ್ರಕರಣಗಳನ್ನು ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಿಸಿದ್ದು. ಈ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ಸತ್ಯಕ್ಕೆ ಸಂದ ಜಯ’ ಎಂದಿದ್ದಾರೆ.
ವಿಕಸಿತ ಭಾರತದ ಕಲ್ಪನೆಯಡಿ ಬಿಜೆಪಿ ರಾಷ್ಟ್ರವ್ಯಾಪಿ ಅಭಿವೃದ್ಧಿಯ ಪಣತೊಟ್ಟು ಕಾರ್ಯನಿರ್ವಹಿಸುತ್ತಿದ್ದು. ಹತಾಶೆಯಿಂದ ಸ್ಥಳೀಯ ಕಾಂಗ್ರೆಸ್ಸಿಗರು ವಿಕೃತ ಮನಸ್ಸಿನಿಂದ ಯುವ ನಾಯಕರನ್ನು , ಕಾರ್ಯಕರ್ತರನ್ನು ಹತ್ತಿಕ್ಕುವ ದುರುದ್ದೇಶದಿಂದ ಆಡಳಿತ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ದರೂ ಧರ್ಮದ ಈ ನಾಡಿನಲ್ಲಿ ಸತ್ಯ ಹೊರಬೀಳಲಿದೆ. ಬಿಜೆಪಿ ನ್ಯಾಯಾಲಯದ ಮೇಲೆ ವಿಶ್ವಾಸವಿರಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ವಿಚಲಿತರಾಗದೆ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ, ಕಾನೂನು ಚೌಕಟ್ಟಿನಲ್ಲಿ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜಯಗಳಿಸುವರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.