ಅದ್ದೂರಿಯಾಗಿ ವಿಜೃಂಭಿಸಿದ್ದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: 9 ದಿನದ ಭರ್ಜರಿ ಕಾರ್ಯಕ್ರಮಗಳ ಖರ್ಚುವೆಚ್ಚದ ಲಕ್ಕಾಚಾರ ಹೇಗಿದೆ..?: ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಸ್ಪಷ್ಟನೆ

ಬೆಳ್ತಂಗಡಿ : ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2023 ನೇ ಫೆಬ್ರವರಿ 19 ರಿಂದ 27ರವರೆಗೆ 9 ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವದ ಖರ್ಚು, ವೆಚ್ಚಗಳ ಬಗ್ಗೆ ಜೂ. 13 ರಂದು ಗುರುವಾಯನಕೆರೆಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಮಾಹಿತಿ ಹಂಚಿಕೊಂಡಿದೆ.

ವೇಣೂರು ಶ್ರೀ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯಲ್ಲಿ ಆಗಿರುವ ಹಣಕಾಸಿನ ಕೊರತೆ ಹೊರತು ಬ್ರಹ್ಮಕಲಶೋತ್ಸವದಲ್ಲಿ ದಾನಿಗಳ ಸಹಕಾರದಿಂದ ಕೊರತೆ ಆಗಲಿಲ್ಲ ಎಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್ ಹೇಳಿದರು.

2014ರಿಂದ ಬ್ರಹ್ಮಕಲಶೋತ್ಸವದವರೆಗೆ ಆದ ಕಾಮಗಾರಿಗಳಿಗೆ ರೂಪಾಯಿ 6.65 ಕೋಟಿಗಳಷ್ಟು ದೇಣಿಗೆ ಸಂಗ್ರಹವಾಗಿದ್ದು ರೂ 7.56 ಕೋಟಿ ಖರ್ಚು ಆಗಿದ್ದು ಸುಮಾರು ರೂಪಾಯಿ 91 ಲಕ್ಷ ಕೊರತೆ ಆಗಿರುತ್ತದೆ. ಇದರಲ್ಲಿ ಶಿಲ್ಪಿಗಳಿಗೆ, ತಾಮ್ರದ ಕೆಲಸ, ಮರದ ಕೆಲಸ, ನೀರಾವರಿ ಡಕ್ಟ್, ಸ್ಲಾಬ್ ಇತ್ಯಾದಿ ಕಾಮಗಾರಿ ಮಾಡಿದವರಿಗೆ ಪಾವತಿಗೆ ಬಾಕಿ ಇದೆ. 56 ಗ್ರಾಮಗಳನ್ನು ಒಳಗೊಂಡ ಈ ಸೀಮೆ ದೇವಸ್ಥಾನಕ್ಕೆ ಭಕ್ತರ ಸಹಕಾರ ಮತ್ತು ಶಾಸಕ ಹರೀಶ್ ಪೂಂಜಾ ರವರ ಸಹಕಾರದಿಂದ ಸಾಲ ಮುಕ್ತವಾಗಲು ಪ್ರಯತ್ನ ನಡೆಯುತ್ತಿದೆ.

ನಮ್ಮ ವ್ಯವಸ್ಥಾಪನ ಸಮಿತಿಯ ಅಧಿಕಾರಾವಧಿ 2023 ನ.04 ಕ್ಕೆ ಮುಕ್ತಾಯವಾಗಿದ್ದು ಆಡಳಿತಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಆರ್ಥಿಕ ಕೊರತೆಯನ್ನು ನೀಗಿಸುವ ಬಗ್ಗೆ ಜೀರ್ಣೋದ್ದಾರ ಸಮಿತಿ ಹಾಗೂ ಭಕ್ತರ ಸಭೆಯನ್ನು 2023 ನ. 25 ರಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ತಿಮ್ಮಣ್ಣರಸ ಡಾ. ಪದ್ಮ ಪ್ರಸಾದ ಅಜಿಲರ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಸಿ ಮನೆ ಮನೆ ಭೇಟಿಯ ಮೂಲಕ ಭಕ್ತರಿಂದ ಸಂಗ್ರಹ ಮಾಡಲು ತೀರ್ಮಾನ ಮಾಡಲಾಯಿತು. ಅದರಂತೆ 8 ಗ್ರಾಮಗಳ ಸುಮಾರು 500 ಮನೆ ಭೇಟಿ ಮಾಡಿ ರೂ. 9 ಲಕ್ಷ ಖಾತೆಗೆ ಜಮೆ ಆಗಿರುತ್ತದೆ. ವ್ಯವಸ್ಥಾಪನ ಸಮಿತಿಯ ಅಧಿಕಾರವನ್ನು ಮಾತ್ರ ಆಡಳಿತಾಧಿಕಾರಿ ಪಡೆದು ಕೊಂಡಿರುತ್ತಾರೆ. ದೇವಾಲಯದ ಸಾಲ ಸಂಪೂರ್ಣ ಸಂದಾಯ ಆಗಲು ಸಹಕಾರ ನೀಡಬೇಕು ಎಂದರು.

ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ ಸಂಗ್ರಹ ಆದ ಮೊತ್ತ ವನ್ನು ಬ್ಯಾಂಕ್ ಸಾಲಕ್ಕೆ ಕಂತು ಪಾವತಿಸಲು ಮಾರ್ಚ್ ತಿಂಗಳ ಕೊನೆಗೆ ಕಚೇರಿಯಿಂದ ಚೆಕ್ ಪುಸ್ತಕ ಪಡೆಯಲು ಹೋದಾಗ ಆಡಳಿತಾಧಿಕಾರಿ ಚೆಕ್ ಪುಸ್ತಕ ನೀಡಲು ನಿರಾಕರಿಸಿರುವುದರಿಂದ ಕಂತು ಭರಿಸಲು ಉಳಿದಿದೆ. ಮುಂದೆ ಹೆಚ್ಚುವರಿ ಬಡ್ಡಿಯನ್ನು ಭರಿಸ ಬೇಕಾಗುತ್ತದೆ ಎಂದರು.

ಜೀರ್ಣೋದ್ದಾರ ಸಮಿತಿಯ ಗ್ರಾಮ ಸಮಿತಿಯ ಸದಸ್ಯ ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕರು ಉಮೇಶ್ ಮಾತನಾಡಿ ಬ್ರಹ್ಮಕಲಶೋತ್ಸವದ ವಿದ್ಯುತ್ ದೀಪ ಅಲಂಕಾರ ಮತ್ತು 9 ದಿನಗಳ ಮನೋರಂಜನೆ, ಯಕ್ಷಗಾನ ಕಾರ್ಯಕ್ರಮಗಳು ದಾನಿಗಳ ಸಹಕರದಿಂದಲೇ ನಡೆದಿದೆ. ಇದರಿಂದ ಯಾವುದೇ ನಷ್ಟ ಆಗಲಿಲ್ಲ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ ಪ್ರಶಾಂತ್ ಹೆಗ್ಡೆ, ಸತೀಶ್ ಕೇರಿಯಾರ್, ಅಣ್ಣು ಮೂಲ್ಯ, ಕಾರ್ತಿಕ್, ಚಂಪಾ, ಯಶೋಧ ಉಪಸ್ಥಿತರಿದ್ದರು

error: Content is protected !!