ನವದೆಹಲಿ: ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ನರೇಂದ್ರ ಮೋದಿಯವರು ‘ಪಿಎಂ ಕಿಸಾನ್ ನಿಧಿ’ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ.
ಇಂದು ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ ಸುಮಾರು 20,000 ಕೋಟಿ ರೂ ಮೊತ್ತದ ಕಡತಕ್ಕೆ ಸಹಿ ಪ್ರಧಾನಿ ಮೋದಿ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, ‘’ನಮ್ಮದು ‘ಕಿಸಾನ್ ಕಲ್ಯಾಣ’ (ರೈತರ ಕಲ್ಯಾಣ)ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಈ ನಿರ್ಧಾರವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾವಣೆಯ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.