ಬೆಂಗಳೂರು : ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ 40% ಸರ್ಕಾರ ಎಂದು ಅಪಪ್ರಚಾರ ಮಾಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2023 ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಅಂದಿನ ಆಡಳಿತಾರೂಢ ಬಿಜೆಪಿಯನ್ನು ಭ್ರಷ್ಟ ಎಂದು ಲೇಬಲ್ ಮಾಡುವ 40 ಪರ್ಸೆಂಟ್ ಕಮಿಷನ್ ಆರೋಪದ ಜಾಹೀರಾತುಗಳನ್ನು ಪ್ರಕಟಿಸಿತ್ತು. ಇದರ ವಿರುದ್ಧ ಬಿಜೆಪಿಯ ಕರ್ನಾಟಕ ಘಟಕ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಇಂದು(ಜೂ.07) ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿ, ಮಾಜಿ ಸಂಸದ ಡಿಕೆ ಸುರೇಶ್ ಅವರು ಶ್ಯೂರಿಟಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದೆ.
ಜಾಮೀನು ಮಂಜೂರು ಬಳಿಕ ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದರು. ಕಚೇರಿಯಲ್ಲಿ ಕಾಂಗ್ರೆಸ್‍ನ ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು.