ಒಂದೇ ತಿಂಗಳು, ಒಂದೇ ತಾರೀಕಿಗೆ ಹುಟ್ಟಿದ ದಂಪತಿಗಳು ಒಂದೇ ದಿನ ಸಾವು..!

ಹುಬ್ಬಳ್ಳಿ: ಉತ್ತರಾಖಂಡ ಸಹಸ್ತ್ರತಾಲ್ ಶಿಖರದ ಚಾರಣದಲ್ಲಿ ಹಿಮಪಾತದಿಂದ ಸಾವನ್ನಪ್ಪಿದ 9 ಕನ್ನಡಿಗರಲ್ಲಿ ಹುಬ್ಬಳ್ಳಿ ಮೂಲದ ಮುಂಗುರವಾಡಿ ದಂಪತಿಗಳು ಕೂಡ ಸಾವನ್ನಪ್ಪಿದ್ದಾರೆ.

ಕರ್ನಾಟಕದಿಂದ ತೆರಳಿದ್ದ 22 ಚಾರಣಿಗರು ಉತ್ತರಾಖಂಡದ ಎತ್ತರದ ಸಹಸ್ತ್ರತಾಲ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿದ್ದರು. ಚಾರಣದ ಗಮ್ಯಸ್ಥಾನವನ್ನು ತಲುಪಿದ ನಂತರ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟು, ಎಲ್ಲಾ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಇದರಲ್ಲಿ 9 ಚಾರಣಿಗರು ಮೃತಪಟ್ಟಿದ್ದಾರೆ. 13 ಜನರನ್ನು ರಕ್ಷಣೆ ಮಾಡಲಾಗಿದೆ.

ಘಟನೆಯಲ್ಲಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ದಂಪತಿ ಕೊನೆಯುಸಿರೆಳೆದಿದ್ದಾರೆ. ಈ ದಂಪತಿಗಳ ಜನನದ ಇಸ್ವಿ ಬೇರೆ ಬೇರೆಯಾದರು ದಿನಾಂಕ, ತಿಂಗಳು ಒಂದೇ ಆಗಿದೆ. ಅಕ್ಟೋಬರ್ 3ರಂದು ಜನಿಸಿದವರು ಇವರು. ವಿಪರ್ಯಾಸವೆಂದರೆ ಜೂನ್ 4ರಂದು ಒಟ್ಟಿಗೆ ಮೃತಪಟ್ಟು ಸಾವಲ್ಲಿಯೂ ಒಂದಾಗಿದ್ದಾರೆ.

ಪ್ರತಿವರ್ಷ ಚಾರಣ ಮಾಡುವ ಹವ್ಯಾಸ ಹೊಂದಿದ್ದ ಇವರಿಗೆ ಈ ಬಾರಿ ಚಾರಣಕ್ಕೆ ಕರ್ನಾಟಕ ಮೌಂಟೆನ್ ಅಸೋಸಿಯೇಷನ್ ಅವಕಾಶ ನೀಡಿರಲಿಲ್ಲ. ಆದರೂ ಅವಕಾಶಕ್ಕಾಗಿ ಸಾಕಷ್ಟು ಪ್ರಯತ್ನಪಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಚಾರಣಕ್ಕೆ ತಮ್ಮ ಮಕ್ಕಳನ್ನೂ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದರು. ಟಿಕೆಟ್ ಸಿಗದ ಕಾರಣ ಮಕ್ಕಳಿಗೆ ಅವಕಾಶ ಸಿಗಲಿಲ್ಲ. ಆದರೆ ಟಿಕೆಟ್ ಪಡೆದುಕೊಂಡ ಇಬ್ಬರು ದಂಪತಿಗಳು ಘೋರ ಅಂತ್ಯ ಕಂಡಿದ್ದಾರೆ.

error: Content is protected !!