ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ: ಸಮೀಪದಲ್ಲೇ ಉದ್ಯಮಿಗಳ ಮನೆ, ಅಕ್ರಮ ಚಟುವಟಿಕೆಗಳಿಗೆ ಬೀಳಬೇಕಿದೆ ಕಡಿವಾಣ: ಮಿಕ್ಸಿ, ಗ್ಯಾಸ್ ಹಂಡೆ ಸೇರಿದಂತೆ ವಸ್ತುಗಳ ಕಳ್ಳತನ, ವಸ್ತುಗಳಿಗಾಗಿ ಶಾಲೆಯಲ್ಲಿ‌ ಹುಟುಕಾಟ: ಸ್ಥಳಕ್ಕೆ ಉಪ್ಪಿನಂಗಡಿ‌ ಪೊಲೀಸರ ಎಂಟ್ರಿ, ಎಸ್ಐ ಅವಿನಾಶ್ ನೇತೃತ್ವದಲ್ಲಿ ತನಿಖೆ

ಪಿಲಿಗೂಡು: ಕಣಿಯೂರು ಗ್ರಾಮದ ಪಿಲಿಗೂಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಖದೀಮರು ಶಾಲೆಯ ಬೀಗ ಒಡೆದು ಮಿಕ್ಸಿ, ಗ್ಯಾಸ್ ಹಂಡೆ ದೋಚಿದ್ದಾರೆ.

ಬುಧವಾರ ರಾತ್ರಿ ಘಟನೆ ನಡೆದಿದ್ದು, ಮೊದಲಿಗೆ ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಅಲ್ಲಿಂದ ಗ್ಯಾಸ್ ಹಂಡೆ ಹಾಗೂ ಸುಮಾರು 8 ಸಾವಿರ ರೂ ಮೌಲ್ಯದ ಹೊಸ ಮಿಕ್ಸಿಯನ್ನು ಕದ್ದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಪಿಕ್ಕಾಸಿನಿಂದ ಮುಖ್ಯಶಿಕ್ಷಕರ ಕಚೇರಿಯನ್ನು ಒಡೆದು ಬಳಿಕ ಅಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ. ಬಳಿಕ ತರಗತಿಗಳಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಶಾಲಾ ಮಕ್ಕಳು ಬೀಗ ತೆರೆಯಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿ‌ ಠಾಣೆಯ ಎಸ್ಐ ಅವಿನಾಶ್ ಅವರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಪಿಲಿಗೂಡು ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆದಿದ್ದು, ದೂರು ನೀಡುವ ಹಂತಕ್ಕೆ ತಲುಪಿರಲಿಲ್ಲ. ಇದೀಗ ವಿದ್ಯಾ ದೇಗುಲವಾದ ಶಾಲೆಗೆ ಖದೀಮರು ಎಂಟ್ರಿ ಕೊಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ‌. ಪಿಲಿಗೂಡು ಮೂಲಕ ಬಳ್ಳಮಂಜ, ಕಕ್ಯಪದವು ಅದೇ ರೀತಿ ಪದ್ಮುಂಜ, ಬಂದಾರು, ನೆಕ್ಕಿಲು, ಕುಪ್ಪೆಟ್ಟಿ ಮೊದಲಾದ ಕಡೆ ಸಂಪರ್ಕಿಸುವ ರಸ್ತೆ ಇದ್ದು ಅಕ್ರಮ ಕೆಲಸ ಎಸಗುವವರಿಗೆ ಉತ್ತಮ ತಾಣ ಎಂಬಂತಾಗಿದೆ ಪೊಲೀಸರು ಈ ಭಾಗದಲ್ಲಿಯೂ ಗಸ್ತು ಹೆಚ್ಚಿಸಬೇಕು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಶಾಲೆಯ ಸಮೀಪದಲ್ಲೇ ಉದ್ಯಮಿಯೊಬ್ಬರ ಮನೆ ಇದ್ದು, ಮುಂದೆ ಇಂತಹ ಅಹಿತಕರ ಘಟನೆ ನಡೆಯದಿರಲಿ, ಕಳ್ಳರನ್ನು ಬೇಗನೇ ಪತ್ತೆ ಹಚ್ಚಿ ಶಿಕ್ಷಿಸಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

error: Content is protected !!