ಶಾಲಾ ಮಕ್ಕಳಿಗೆ ಅಪಾಯ ತಾರದಿರಲಿ ಹೆದ್ದಾರಿ ಕಾಮಗಾರಿ: ವಾಹನ ಸವಾರರೇ ಎಚ್ಚರ: ರಸ್ತೆ ದಾಟುತ್ತಿದ್ದಾರೆ ಮಕ್ಕಳು ಸ್ಪೀಡ್ ಗೆ ಬೀಳಲಿ ಬ್ರೇಕ್:

 

 

 

ಬೆಳ್ತಂಗಡಿ: 2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲಾ ಮಕ್ಕಳು ಬ್ಯಾಗ್ ಹೇರಿಕೊಂಡು ಶಾಲೆಯತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಮಧ್ಯೆ ಮಕ್ಕಳ ಸುರಕ್ಷತೆಯ ಆತಂಕ ಹೆಚ್ಚಾಗುತ್ತಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮೊದಲೆ ಅವ್ಯವಸ್ಥಿತವಾಗಿದೆ. ರಸ್ತೆಯ ಎರಡೂ ಬದಿ ಅಗೆದು ವಾಹನ ಸಂಚಾರ ಕಷ್ಟಕರವಾಗಿದೆ. ಕಾಮಗಾರಿ ಆರಂಭವಾದ ಬಳಿಕವಂತು ಸಾಲು ಸಾಲು ಅಪಘಾತ ಸಂಭವಿಸಿದೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈಗ ಮಕ್ಕಳು ಇದೇ ರಸ್ತೆಯಲ್ಲಿ ಸಾಗಬೇಕು. ಎಷ್ಟೋ ಮಕ್ಕಳು ಬಸ್ಸಿನ ಮೂಲಕ ಬಂದು ರಸ್ತೆ ದಾಟಿ ಶಾಲೆ ಸೇರಬೇಕು. ಆದರೆ ಮಕ್ಕಳು ರಸ್ತೆ ದಾಟುವ ವೇಳೆ ಜಾಗರೂಕತೆ ವಹಿಸಬೇಕಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಂತಿದೆ.

 

 

 

 


ಶಾಲೆ, ಕಾಲೇಜ್ ಬಿಡುವ ಸಂದರ್ಭದಲ್ಲಿ ಸಂತೆಕಟ್ಟೆ, ಚರ್ಚ್ ರೋಡ್, ವಾಣಿ ಸ್ಕೂಲ್, ಪ್ರಥಮ ದರ್ಜೆ, ಗುರುವಾಯಕೆರೆ, ಒಮ್ಮೆಗೆ ರಸ್ತೆ ಬದಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ತಾಲೂಕಿನಲ್ಲೀಗ ವಾಹನ ಸಂಚಾರ ಕೂಡ ದಟ್ಟವಾಗಿದೆ. ವಾಣಿ ಕಾಲೇಜ್ ಸಮೀಪವಂತೂ ಮಕ್ಕಳಿಗೆ ಬಸ್ಸಿಗೆ ಕಾಯುವುದಕ್ಕಾಗಲಿ, ಬಸ್ಸಿಗೆ ಹತ್ತುವುದಕ್ಕಾಗಲಿ ಸರಿಯಾದ ಜಾಗ ಇಲ್ಲ. ಬಸ್ಸಿನವರಿಗಂತು ಬಸ್ ನಿಲ್ಲಿಸೋದಿಕ್ಕೆ ಸ್ಥಳವೇ ಇಲ್ಲದಂತಾಗಿದೆ.
ಪುಟಾಣಿ ಮಕ್ಕಳು ದೊಡ್ಡ ದೊಡ್ಡ ಬ್ಯಾಗ್ ಹೊತ್ತುಕೊಂಡು ರಸ್ತೆ ದಾಟುವ ಸಾಹಸ ಮಾಡುತ್ತಾರೆ. ಈ ಸಂದರ್ಭದಲ್ಲಿ ವಾಹನ ಸವಾರರು ಎಚ್ಚರದಿಂದಿರಬೇಕು. ಶಾಲೆ, ಕಾಲೇಜ್ ಸುತ್ತ ಮುತ್ತ ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸಬೇಕು. ಕಾಮಗಾರಿಯ ಅವ್ಯವಸ್ಥೆಯ ಮಧ್ಯೆ ಮಕ್ಕಳ ಪ್ರಾಣಕ್ಕೆ ವಾಹನ ಸವಾರರು ಆಪತ್ತು ತರಬಾರದು.
ಸಂಚಾರಿ ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ವಹಿಸಿ ಮಕ್ಕಳು ಸುರಕ್ಷಿತವಾಗಿ ರಸ್ತೆ ದಾಟುವಂತೆ ಮಾಡಬೇಕು. ಪ್ರತೀ ಶಾಲಾ ಕಾಲೇಜ್ ಹತ್ತಿರ ಬೆಳಗ್ಗೆ, ಸಂಜೆ ಹಾಗೂ ಶನಿವಾರ ಮಧ್ಯಾಹ್ನ ಸಂಚಾರಿ ಪೊಲೀಸರು ಮಕ್ಕಳ ರಕ್ಷಕರಾಗಿ ನಿಂತರೆ ಮಕ್ಕಳು ನಿರಾಳವಾಗಿ ರಸ್ತೆ ದಾಟಬಹುದು.
ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರು ಮಕ್ಕಳಿಗೆ ಎಚ್ಚರದಿಂದ ರಸ್ತೆ ದಾಟುವಂತೆ ತಿಳಿಹೇಳಬೇಕು. ಶಾಲೆಯಲ್ಲಿ ಶಿಕ್ಷಕರು ಈ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು.ಮಳೆಗಾಲ ಸಂದರ್ಭ ತುಂಬಾ ಎಚ್ಚರಿಕೆ ಹಾಗೂ ರಸ್ತೆ ಸಂಚಾರದ ಬಗ್ಗೆ ಮಕ್ಕಳು ಸರಿಯಾದ ಮಾಹಿತಿ ಪಡೆದ್ದಲ್ಲಿ ಅನಾಹುತಗಳನ್ನು ತಪ್ಪಿಸಬಹುದು. ಮಕ್ಕಳೂ ಸುರಕ್ಷಿತವಾಗಿ ಮನೆಯಿಂದ ಶಾಲೆಗೆ , ಶಾಲೆಯಿಂದ ಮನೆಗೆ ತೆರಳಬಹುದು.

error: Content is protected !!