ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ : ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರ ಉಪಸ್ಥಿತಿ:

 

 

 

ಬೆಳ್ತಂಗಡಿ: ದಿನವಿಡೀ ಶಾಸಕ ಹರೀಶ್ ಪೂಂಜ ಮನೆಯಲ್ಲಿ ನಡೆದ ಹೈಡ್ರಾಮಾದ ಬಳಿಕ ಶಾಸಕ ಹರೀಶ್ ಪೂಂಜ ರಾತ್ರಿ 9.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಪೊಲೀಸರು ವಿಚಾರಣೆ ನಡೆಸಿದ ಬಳಿಕ ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.
ಶಾಸಕರ ಮನೆ ಮುಂದೆ ದಿನವಿಡೀ ಪೊಲೀಸರು ಕಾದರೂ ಕಾರ್ಯಕರ್ತರು ಶಾಸಕರನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆ ಪೊಲೀಸರು ತಕ್ಷಣ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು. ಇದೀಗ 9.30ರ ಸುಮಾರಿಗೆ ಹರೀಶ್ ಪೂಂಜ ಸ್ವತಃ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ.

ಶಾಸಕ ಹರೀಶ್ ಪೂಂಜ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿತರಾದ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಮನೆಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸಂಸದರಾದ ನಳೀನ್ ಕುಮಾರ್ ಕಟೀಲ್, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿದ್ದರು. ಅದರಂತೆ ರಾತ್ರಿ  ಶಾಸಕರು ಠಾಣೆಗೆ ವಿಚಾರಣೆಗೆ ಆಗಮಿಸಿದರು.

ಸದ್ಯ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾರ ವಿಚಾರಣೆ ನಡೆಸಲಾಗಿದೆ. ಬೆಳ್ತಂಗಡಿ ಠಾಣಾ 58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಹರೀಶ್ ಪೂಂಜ ಅವರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬೆಳಗ್ಗೆಯಿಂದ ಹರೀಶ್ ಪೂಂಜ ಅವರನ್ನು ಪೊಲೀಸರು ಅರೆಸ್ಟ್ ಮಾಡುವ ಪ್ರಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದ್ದರು. ಬೆಳಗ್ಗೆಯಿಂದ ಇಡೀ ದಿನ ಬಂಧನದ ಹೈಡ್ರಾಮವೇ ನಡೆದಿದೆ. ಹರೀಶ್ ಪೂಂಜಾರ ಗರ್ಡಾಡಿಯ ಮನೆಯಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಕೆಲ ಹೊತ್ತಿನಲ್ಲಿಯೇ ಅವರ ಮನೆಗೆ ವಕೀಲರು, ಬಿಜೆಪಿ ನಾಯಕರು ಧಾವಿಸಿ ಹರೀಶ್ ಪೂಂಜ ಸಹಾಯಕ್ಕೆ ಬಂದಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಇನ್ಸ್​ಪೆಕ್ಟರ್​, ಡಿವೈಎಸ್ಪಿ, ಬಿಜೆಪಿ ನಾಯಕರು, ವಕೀಲರು ಪೊಲೀಸರೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ್ದಾರೆ. ಶಾಸಕರ ಬಂಧನವಾಗುತ್ತದೆ ಎಂದು ತಿಳಿಯುತ್ತಿದ್ದಂತೆ ಇನ್ನಷ್ಟು ಕಾರ್ಯಕರ್ತರು ಜಮಾಯಿಸಿ ಬಂಧನ ಮಾಡದಂತೆ ಘೋಷಣೆ ಕೂಗಲಾರಂಭಿಸಿದ್ದರು. ಸ್ಥಳಕ್ಕೆ ಬಂದ ಸಂಸದ ನಳಿನ್ ಕುಮಾರ್ ಕಟೀಲು ಅವರು, ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡಿದ್ರೆ ಜಿಲ್ಲೆಯ ಬಂದ್‌ಗೆ ಕರೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅನ್ಯಾಯದ ವಿರುದ್ಧ, ನಿರಪರಾಧಿಯ ಬಂಧನದ ವಿರುದ್ಧದ ಹೋರಾಟದಲ್ಲಿ ಶಾಸಕರು ಭಾಗಿ ಆಗೋದು ಸಾಮಾನ್ಯ. ಇದಕ್ಕಾಗಿ ಶಾಸಕರ ಮೇಲೆ ಕೇಸು ದಾಖಲಿಸುವ ಹೀನ ಕೃತ್ಯವನ್ನು ಸಿದ್ದರಾಮಯ್ಯ ಸರ್ಕಾರ ಪೊಲೀಸರ ಮೂಲಕ ಮಾಡಿದೆ. ಈ ಮೂಲಕ ಕೇಸ್​ ಹಾಕುವ ದ್ವೇಷದ ರಾಜಕೀಯ ಮಾಡುತ್ತಿದೆ. ಶಾಸಕರ ಜನಪ್ರಿಯತೆ ಸಹಿಸದೇ ಸಣ್ಣ ಕಾರಣ ಇಟ್ಟು ಬಂಧಿಸುವ ಕಾರ್ಯಕ್ಕೆ ಕೈಹಾಕಿದೆ. ನೋಟಿಸ್ ಕೊಟ್ಟು ಹೋಗಬೇಕಾದವರು ಬಂಧಿಸುವುದಕ್ಕೆ ಮುಂದಾಗಿದ್ದಾರೆ. ನಿಯಮ ಮೀರಿ ಸಂವಿಧಾನ ಮೀರಿ ಪೊಲೀಸರು ವರ್ತನೆ ಮಾಡಿದ್ದಾರೆ‌. ಕಾನೂನಿಗೆ ಗೌರವ ಕೊಟ್ಟು ನೋಟಿಸ್ ತೆಗೆದುಕೊಂಡಿದ್ದಾರೆ. ಐದು ದಿನಗಳ ಕಾಲಾವಾಕಾಶ ಕೇಳಿದ್ದಾರೆ.‌ ಇದಕ್ಕೂ ಮೀರಿ ಒತ್ತಡ ಹಾಕಿದ್ರೆ ಇಡೀ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದ್ದರು.

error: Content is protected !!