ಸಾಂದರ್ಭಿಕ ಚಿತ್ರ
ಸಿಂಗಾಪುರ : ಆಗಸದಲ್ಲೇ ವಿಮಾನ ಭಾರೀ ಪ್ರಮಾಣದಲ್ಲಿ ಅಲುಗಾಡಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಸಿಂಗಾಪುರ ಏರ್‌ಲೈನ್ಸ್ ನಲ್ಲಿ ಸಂಭವಿಸಿದೆ.
ಸಿಂಗಾಪುರವಿಮಾನಯಾನ ಸಂಸ್ಥೆ, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 777-300 ಇಆರ್ ವಿಮಾನವು, ಸಿಂಗಾಪುರದತ್ತ ಬರುತ್ತಿರುವಾಗ ಮಾರ್ಗಮಧ್ಯದಲ್ಲಿ ಏಕಾಏಕಿ ಅಲುಗಾಡಿದೆ. ಪ್ರಯಾಣಿಕರು ಆಘಾತಕ್ಕೀಡಾಗಿದ್ದಾರೆ. ತಕ್ಷಣವೇ ವಿಮಾನವನ್ನು ಬ್ಯಾಂಕಾಕ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 3.45 ಕ್ಕೆ ಇಳಿಸಲಾಯಿತು. ಈ ಬಗ್ಗೆ ಸಿಂಗಾಪುರ ವಿಮಾನಯಾನ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಘಟನೆಯ ಸಂದರ್ಭದಲ್ಲಿ 18 ಸಿಬ್ಬಂದಿ ಸೇರಿ, 211 ಪ್ರಯಾಣಿಕರು ಇದ್ದರು. ಇದರಲ್ಲಿ ಓರ್ವ ಪ್ರಯಾಣಿಕ ವಿಮಾನದಲ್ಲೇ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ವಿಮಾನ ಅವಘಡದಲ್ಲಿ ಗಾಯಗೊಂಡ ಎಲ್ಲಾ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಅಗತ್ಯವಿರುವ ಹೆಚ್ಚುವರಿ ಸಹಾಯವನ್ನೂ ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞರು ಹವಾಮಾನ ವೈಪರೀತ್ಯದ ಬಗ್ಗೆ ರಾಡಾರ್ ಮೊದಲೇ ಮಾಹಿತಿ ನೀಡುವುದಿಲ್ಲ, ವಿಮಾನ ಪೈಲಟ್‌ಗೆ ಮುನ್ನೆಚ್ಚರಿಕೆ ನೀಡಲು ಸಾಧ್ಯವಾಗಿಲ್ಲ. ಪ್ರಯಾಣದ ವೇಳೆ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸದೇ ಇರುವಾಗ ಇಂತಹ ಸಂದರ್ಭಗಳಲ್ಲಿ ಅನಾಹುತ ಉಂಟಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.