ಬೆಳ್ತಂಗಡಿ ಬಿಜೆಪಿಯಿಂದ ಅನುಮತಿ ಇಲ್ಲದ ಪ್ರತಿಭಟನಾ ಸಭೆ ಶಾಸಕ ಹರೀಶ್ ಪೂಂಜ ಸೇರಿದಂತೆ ಇತರರ‌ ಮೇಲೆ ಪ್ರಕರಣ ದಾಖಲು:

 

 

 

ಬೆಳ್ತಂಗಡಿ : ಅಕ್ರಮ ಕಲ್ಲುಕೊರೆ ಪ್ರಕರಣದಲ್ಲಿ ಬೆಳ್ತಂಗಡಿ ಯುವ ಮೊರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಸುಳ್ಳು ಕೇಸ್ ದಾಖಲಿಸಿ ಮೇ.18 ರಂದು ರಾತ್ರಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಮೇ.20 ರಂದು ಯಾವುದೇ ಅನುಮತಿ ಇಲ್ಲದೆ ಲಾಯಿಲದಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದವರೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮತ್ತು ಇತರರು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಪೊಲೀಸರು , ತಹಶೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿ ಭಾಷಣ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹರೀಶ್ ಪೂಂಜ ಮತ್ತು ಇತರರ ಮೇಲೆ ಮೇ.21 ರಂದು ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.

*ಪ್ರಕರಣದ ಹಿನ್ನಲೆ :* ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ 18.05.2024 ರಂದು ವರದಿಯಾಗಿರುವ ಅ.ಕ್ರ: 56/2024, ಕಲಂ: 9B(1)(b) ಸ್ಫೋಟಕ ಕಾಯ್ದೆ 1884 ಕಲಂ 5 The Explosives Substance Act-1908 ಪ್ರಕರಣ ಸಂಬಂಧಿಸಿದಂತೆ, ಆರೋಪಿತ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಶಶಿರಾಜ್ ಶೆಟ್ಟಿ ಬಂಧನವನ್ನು ವಿರೋಧಿಸಿ, ದಿನಾಂಕ 20.05.2024 ರಂದು, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಕಾನೂನುಬಾಹಿರವಾಗಿ, ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಮತ್ತು ಇತರರು, ಜನರನ್ನು ಗುಂಪು ಸೇರಿಸಿ, ಪ್ರತಿಭಟನಾ ಸಭೆ ನಡೆಸಿರುತ್ತಾರೆ. ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜರವರು, ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ದನೆಂದು ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ರೀತಿಯಲ್ಲಿ ‌ಬೆಳ್ತಂಗಡಿಯಲ್ಲಿ ನಡೆಯಬಹುದು ಎಂದು ಬೆದರಿಸಿ, ಸಾರ್ವಜನಿಕ ನೌಕರರಾದ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಹಾಗೂ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ ಎಂಬ ಬಗ್ಗೆ ದೂರು ನೀಡಲಾಗಿದೆ.

error: Content is protected !!