ಬಟ್ಟೆಯಲ್ಲಿ ಕೊಳೆ ಮಾಡಿಕೊಂಡ ಕಾರಣಕ್ಕೆ ತಾಯಿಯಿಂದ ಮಗನ ಹತ್ಯೆ!: ಅಮ್ಮನ ಕೋಪಕ್ಕೆ ಬಲಿಯಾದ ಎಂಟು ವರ್ಷದ ಬಾಲಕ

ಹರಿಯಾಣ: ಬಟ್ಟೆಯಲ್ಲಿ ಕೊಳೆ ಮಾಡಿಕೊಂಡ ಕಾರಣಕ್ಕೆ ತಾಯಿಯೊಬ್ಬಳು ತನ್ನ ಮಗನನ್ನೇ ಹತ್ಯೆ ಮಾಡಿದ ಘಟನೆ ದೆಹಲಿಯ ಸಮೀಪದಲ್ಲಿರುವ ಗುರುಗ್ರಾಮದಲ್ಲಿ ಸಂಭವಿಸಿದೆ.

ಎಂಟು ವರ್ಷದ ಬಾಲಕ ಶಾಲೆಯಿಂದ ಮನೆಗೆ ಹಿಂತಿರುಗುವ ವೇಳೆ ತನ್ನ ಬಟ್ಟೆಯಲ್ಲಿ ಕೊಳೆ ಮಾಡಿಕೊಂಡಿದ್ದ. ಜೊತೆಗೆ ಕೆಲವು ಪುಸ್ತಕಗಳನ್ನು ಶಾಲೆಯಲ್ಲೇ ಮರೆತು ಬಂದಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಮಗುವನ್ನು ಅಮಾನುಷವಾಗಿ ಥಳಿಸಿದ್ದಾಳೆ. ಮನೆಯೊಳಗೆ ಬರಲು ಬಿಡದೆ ಹೊರಗೆ ನಿಲ್ಲಿಸಿ, ಸ್ವಲ್ಪ ಸಮಯದ ಬಳಿಕ, ಬಟ್ಟೆಯಲ್ಲೇಕೆ ಕೊಳೆ ಮಾಡಿಕೊಂಡೆ?, ಪುಸ್ತಕಗಳನ್ನೇಕೆ ಮರೆತು ಬಂದೆ? ಎಂದು ಗದರಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪತಿ ಸಂಜೆ ಮನೆಗೆ ಬಂದಾಗ ಪುತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ನೋಡಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೆಕ್ಟರ್-18 ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಆದರೆ ತನ್ನ ಮಗನನ್ನು ಕೊಂದಿರುವ ಬಗ್ಗೆ ಮಹಿಳೆಯಲ್ಲಿ ಕಿಂಚಿತ್ತೂ ಪಶ್ಚಾತ್ತಾಪ ಕಾಣುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!