ಮೂರನೇ ಬಾರಿಗೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ: ಗಂಗಾಮಾತೆಗೆ ಪೂಜೆ, ಕಾಲ ಭೈರವೇಶ್ವರನ ಆಶೀರ್ವಾದ ಪಡೆದ ಪ್ರಧಾನಿ

ವಾರಾಣಸಿ: ಮೂರನೇ ಬಾರಿಗೆ ಅಭ್ಯರ್ಥಿಯಾಗಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದಶಾಶ್ವಮೇಧ ಘಾಟ್‌ನಲ್ಲಿ ಐವರು ವೈದಿಕ ಆಚಾರ್ಯರ ಸಮ್ಮುಖದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ನಂತರ ಕಾಲ ಭೈರವೇಶ್ವರ ದೇವಸ್ಥಾನದತ್ತ ತೆರಳಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿಯ ಕಚೇರಿಗೆ ತೆರಳಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದರು.

ಬ್ರಾಹ್ಮಣ, ಒಬಿಸಿ ಮತ್ತು ದಲಿತ ಸಮುದಾಯದವರು ಪ್ರಧಾನಮಂತ್ರಿಗಳ ಸೂಚಕರಾಗಿದ್ದು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರು, 2.5 ಲಕ್ಷಕ್ಕೂ ಹೆಚ್ಚು ಒಬಿಸಿಗಳು, ಸುಮಾರು 1.25 ಲಕ್ಷ ದಲಿತ ಮತದಾರರಿರುವುದು ಗಮನಾರ್ಹವಾಗಿದೆ.

ಜೂನ್ 1 ರಂದು ವಾರಾಣಸಿಯಲ್ಲಿ ಮತದಾನ ನಡೆಯಲಿದ್ದು ಈ ಬಾರಿಯೂ ಪ್ರಧಾನಿ ಮೋದಿ ವಾರಾಣಸಿಯಿಂದ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಭರವಸೆಯನ್ನು ಹೊಂದಿದ್ದಾರೆ.

error: Content is protected !!