‘ಹಿಂದೂ – ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು: ಎಲ್ಲಾ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು’: ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ

ಬೆಳ್ತಂಗಡಿ: ಕೆಲ ಸ್ವಾರ್ಥ ರಾಜಕಾರಣಿಗಳಿಂದ ಯುವಜನರನ್ನು ಪ್ರಚೋದಿಸುವ ಕಾರ್ಯ ಆಗುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಈ ಕಾರ್ಯ ನಡೆಯುತ್ತಿದ್ದು ಅಂತವರಿAದ ಹಿಂದೂ, ಮುಸಲ್ಮಾನ ಯುವಜನರನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ ಬೆಂಗಳೂರು ಹೇಳಿದರು.

ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಸುಮಾರು 800 ವರ್ಷಗಳಿಗೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ನಾಡಿನ ಸರ್ವ ಧರ್ಮೀಯ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ನ ಉರೂಸ್ ಪ್ರಯುಕ್ತ ನಡೆದ ಸರ್ವ ಧರ್ಮೀಯ ಸೌಹಾರ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು

ಇತಿಹಾಸವನ್ನು ಇತಿಹಾಸವಾಗಿಯೇ ಹೇಳಿಕೊಡಬೇಕು. ವಿಕೃತ ಮಾಧ್ಯಮ ಮತ್ತು ಮನಸೋ ಇಚ್ಚೇ ವಿಶ್ಲೇಷಣೆ ಮಾಡುವ, ಧರ್ಮಾಧಾರಿತವಾಗಿ ತನ್ನಿಷ್ಟದ ಧರ್ಮವನ್ನು ವೈಭವೀಕರಿಸಿ ಇತರ ಧರ್ಮವನ್ನು ತೆಗಳುವ ಕೀಳು ಮಟ್ಟದ ವ್ಯವಸ್ಥೆ ಸಮಾಜದ ಬೆಳವಣಿಗೆಗೆ ಧಕ್ಕೆ ತರುತ್ತದೆ. ಕರಾವಳಿ ಜಿಲ್ಲೆ ಶೈಕ್ಷಣಿಕ ಪ್ರಗತಿಯಲ್ಲಿ ಮೇಲು ಸ್ಥರದಲ್ಲಿದ್ದು ಸಂತೋಷ. ಆದರೆ ಕೋಮುವಾದದಲ್ಲೂ ಮುಂದಿರುವುದು ಖೇದಕರ. ಕುಕೃತ್ಯವನ್ನು ಕುಕೃತ್ಯವಾಗಿಯೇ ಕಾಣಬೇಕೇ ಹೊರತು ಅದರಲ್ಲಿ ಧರ್ಮ ಹುಡುಕುಡುವುದು ಸರಿಯಲ್ಲ ಎಂದರು. ಧರ್ಮದ ಅನುಷ್ಠಾನ ಮತ್ತು ಪರ ಧರ್ಮದ ಮೇಲಿನ ಗೌರವ ಪಾಲಿಸೋಣ. ಆ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಗಳಾಗಬೇಕು ಎಂದರು.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಎಲ್ಲರಿಗೂ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ಕೆಡುಕು ಬಯಸುವುದು ಯಾವ ಅರ್ಥದಲ್ಲೂ ಧರ್ಮವಾಗಲು ಸಾಧ್ಯವೇ ಇಲ್ಲ. ನಮ್ಮ ಮನಸ್ಸಿನ ಕಲ್ಮಶವನ್ನು ದೂರೀಕರಿಸಿದರೆ ಇನ್ನೊಂದು ಧರ್ಮದ ಒಳಿತು ನಮಗೆ ಅರಿವಾಗುತ್ತದೆ ಎಂದರು.


ಪ್ರಮುಖ ಧಾರ್ಮಿಕ ಸಂದೇಶ ನೀಡಿದ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮುರಳಿಕೃಷ್ಣ ಇರ್ವತ್ರಾಯ ಅವರು, ಸಾಮರಸ್ಯ ಮತ್ತು ಭಾವೈಕ್ಯತೆ ಭಾರತದ ಹೆಗ್ಗುರುತು. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ, ಕಾಜೂರು ಕ್ಷೇತ್ರ, ಕ್ರೈಸ್ತ ಧರ್ಮದ ಡಯಾಸಿಸ್ ಕೇಂದ್ರ, ಬಸದಿ ಇತ್ಯಾಧಿಗಳಿಂದ ಕೂಡಿದ ನಮ್ಮ ತಾಲೂಕು ಹೆಮ್ಮೆಯ ಕೇಂದ್ರ. ಧರ್ಮದ ಮೌಲ್ಯಗಳನ್ನು ನಮ್ಮ ವಸ್ತçಧಾರಣೆಯಲ್ಲಿ ತಿಳಿದುಕೊಳ್ಳದೆ ನಮ್ಮ ಧರ್ಮಾನುಷ್ಟಾನದಲ್ಲಿ ಗುರುತಿಸುವಂತಾಗೋಣ. ದೇಹ ಅಂದರೆ ಮನುಷ್ಯ. ಮಾನವೀಯತೆ. ಅದೇ ರೀತಿ ದೇಶ ಎಂದರೆ ಭಾರತೀಯತೆ ಎಂಬುದನ್ನು ಅರಿಯೋಣ ಎಂದರು.

ಸಮಾರಂಭದಲ್ಲಿ ಸಹಕಾರಿ ಧುರೀಣ ಲಕ್ಷ್ಮಣ ಗೌಡ ಬಂಗಾಡಿ, ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ನೂರುದ್ದೀನ್ ಸಾಲ್ಮರ, ಹನೀಫ್ ಮಲ್ಲೂರು, ರಹೀಮ್ ಮಲ್ಲೂರು, ಅಬ್ದುಶ್ಶುಕೂರ್ ಉಜಿರೆ, ಕಾಸಿಂ ಮಲ್ಲಿಗೆಮನೆ, ಬಿ.ಎ ಯೂಸುಫ್ ಶರೀಫ್, ಇಬ್ರಾಹಿಂ ಮದನಿ, ಕೆ.ಯು ಉಮರ್ ಸಖಾಫಿ, ಹೆಚ್ ಮುಹಮ್ಮದ್ ವೇಣೂರು, ಸಮದ್ ಸೋಂಪಾಡಿ, ಬಿ.ಎ ನಝೀರ್ ಬೆಳ್ತಂಗಡಿ, ಮುಸ್ತಫ ರೂಬಿ, ಬಶೀರ್ ಸವಣೂರು, ಅಬ್ದುಲ್ ರಝಾಕ್ ಸವಣೂರು, ಸಿರಾಜ್ ಬೈಕಂಪಾಡಿ, ಸೈದುದ್ದೀನ್, ನಾಸಿರ್ ಕುಂಬ್ರ, ಉಮರ್ ಮುಸ್ಲಿಯಾರ್ ಕೇರಿಮಾರ್, ಡಾ. ಆಲ್ಬಿನ್, ಕಬೀರ್ ಕಾಜೂರು, ಝಕರಿಯಾ ಹಾಜಿ ಆತೂರು ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.

ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ಅಶ್ರಫ್ ಆಲಿ ಕುಂಞÂ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಸಾವಿರಾರು ಮಂದಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿದರು.
ಉರೂಸ್ ಪ್ರಯುಕ್ತ ಕಾಜೂರು ಪ್ರದೇಶವನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿತ್ತು.

error: Content is protected !!