ಕಳಸ: ಕಾಫಿ ತೋಟಕ್ಕೆ ನುಗ್ಗಿದ ಕಾಡುಕೋಣಗಳ ಹಿಂಡು ಬೆಳೆ ನಾಶ ಮಾಡಿರುವ ಘಟನೆ ಕಳಸದಲ್ಲಿ ನಡೆದಿದೆ.
ಭೀಕರ ಬರದಿಂದಾಗಿ ಅರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿರುವ ಕಾರಣ ಕಾಡುಪ್ರಾಣಿಗಳು ಆಹಾರ ಅರಸಿಕೊಂಡು ನಾಡಿನತ್ತ ಮುನ್ನುಗ್ಗಿದ್ದು ಮಲೆನಾಡು ಭಾಗದಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.
ಕಳಸ ತಾಲೂಕಿನ ಗೊರಸುಡಿಗೆ, ತೋಟ ದೂರು ಗ್ರಾಮಗಳಲ್ಲಿ ಕಾಡು ಕೋಣ ದಾಳಿ ಮಿತಿ ಮೀರಿದ್ದು, ಕಾಫಿ ತೋಟದ ಬೆಳೆ ನಾಶ ಮಾಡುತ್ತಿವೆ. ಅಲ್ಲದೆ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಕಾಡುಕೋಣಗಳು ದಾಳಿ ಮಾಡಿವೆ. ಹೀಗಾಗಿ ಕಾರ್ಮಿಕರು ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ಕಾರ್ಮಿಕರಿಲ್ಲದೇ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಾಫಿತೋಟ ಮಾತ್ರವಲ್ಲದೆ ಅಡಿಕೆ, ಬಾಳೆ ಗಿಡಗಳಿಗೆ ಕಾಡುಕೋಣಗಳಿಂದ ಹಾನಿಯಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕಾಡುಕೋಣ ಹಾವಳಿ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.