ಮೇ.26: ಯಕ್ಷಧ್ರುವ ಪಟ್ಲ ಸಂಭ್ರಮ-2024: ಉದ್ಯಮಿ ಶಶಿಧರ ಶೆಟ್ಟಿ ಸೇರಿದಂತೆ ಟ್ರಸ್ಟಿನ ಮಹಾದಾನಿಗಳಿಗೆ ಪಟ್ಲ ಸತೀಶ್ ಶೆಟ್ಟಿಯವರಿಂದ ಆಮಂತ್ರಣ : ವಿಭಿನ್ನ ಕಾರ್ಯಕ್ರಮಗಳ ಮೂಲಕ ಪಟ್ಲ ಸಂಭ್ರಮ ಆಯೋಜನೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ‘ಯಕ್ಷಧ್ರುವ ಪಟ್ಲ ಸಂಭ್ರಮ – 2024’ ಮೇ.26ರಂದು ಮಂಗಳೂರು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದ್ದು ಮೇ.12ರಂದು ಟ್ರಸ್ಟಿನ ಮಹಾದಾನಿಗಳಿಗೆ ಆಮಂತ್ರಣ ಪತ್ರ ನೀಡಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಪ್ರಧಾನ ಸಂಚಾಲಕರೂ, ಪ್ರತಿಷ್ಠಿತ ಉದ್ಯಮಿಗಳೂ, ಮಹಾದಾನಿಗಳಾದ ಶಶಿಧರ ಶೆಟ್ಟಿ, ಬರೋಡಾ ಅವರ ಗುರುವಾಯನಕೆರೆಯ “ನವಶಕ್ತಿ” ಮನೆಗೆ ಭೇಟಿ ನೀಡಿ ಮಾತೃಶ್ರೀ ಕಾಶಿಯಮ್ಮನವರಿಗೆ ಹಾಗೂ ಉದಾರಿ ಶಶಿಧರ ಶೆಟ್ಟಿಯವರಿಗೆ “ಪಟ್ಲ ಸಂಭ್ರಮ 2024” ರ ಆಮಂತ್ರಣ ಪತ್ರವನ್ನು ನೀಡಲಾಯಿತು.

ಉದ್ಯಮಿ ಶಶಿಧರ ಶೆಟ್ಟಿಯವರು 1 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಟ್ರಸ್ಟಿಗೆ ನೀಡಿದ್ದು, ಬಡ ಕಲಾವಿದರಿಗೆ ಮನೆ ನಿರ್ಮಿಸಿ ಕೊಡುವ ‘ಪಟ್ಲ ಯಕ್ಷಾಶ್ರಯ’ಕ್ಕೂ ಹೆಚ್ಚಿನ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಟ್ರಸ್ಟಿಗೆ ಇವರು ನೀಡುತ್ತಿರುವ ನಿರಂತರ ಸೇವೆಯಿಂದ ಟ್ರಸ್ಟಿನ ಮಹಾಪೋಷಕರಾಗಿದ್ದಾರೆ.

ಕಳೆದ 2 ವರ್ಷಗಳ “ಪಟ್ಲ ಸಂಭ್ರಮ”ದ ಸಂದರ್ಭದಲ್ಲಿ 1 ಕೋಟಿಗೂ ಅಧಿಕ ಹಣವನ್ನು ಸಂಭ್ರಮದ ಯಶಸ್ಸಿಗೆ ಮಾರ್ಗದರ್ಶನ ಮಾಡಿದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಆಮಂತ್ರಣ ಪತ್ರ ನೀಡಲಾಯಿತು.

ಪಟ್ಲ ಸತೀಶ್ ಶೆಟ್ಟಿ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಸುದೇಶ್ ರೈ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ, ಸಂಘಟನಾ ಕಾರ್ಯದರ್ಶಿ ಕದ್ರಿ ಪ್ರದೀಪ್ ಆಳ್ವ ಅವರುಗಳು ಗೌರವಿಸಿ ನಂತರ ಆಮಂತ್ರಣ ಪತ್ರ ನೀಡಿದರು..

ಟ್ರಸ್ಟಿನ ಪೋಷಕರೂ, ಕೊಡುಗೈ ದಾನಿಗಳಾದ ಪ್ರತಿಷ್ಠಿತ ಮೆಕೊಯಿ ಸಂಸ್ಥೆಯ ಸಂಸ್ಥಾಪಕರಾದ ಕೆ. ಎಂ. ಶೆಟ್ಟಿಯವರನ್ನು ಸುರತ್ಕಲ್ ನ ಮಧ್ಯಗುತ್ತು ಮನೆಯಲ್ಲಿ ಭೇಟಿಯಾಗಿ, “ಪಟ್ಲ ಸಂಭ್ರಮ 2024” ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಅವರು “ಪಟ್ಲ ಯಕ್ಷಾಶ್ರಯ” ಯೋಜನೆಯನ್ನು ಮೆಚ್ಚಿ 10 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದರು. ಈ ಮೊದಲು ಇವರು ಟ್ರಸ್ಟಿಗೆ ಆರ್ಥಿಕ ನೆರವನ್ನು ನೀಡಿದ್ದಾರೆ.
ಯಕ್ಷಸಂಭ್ರಮದಲ್ಲಿ ಬೆಳಗ್ಗೆ 7:45 ರಿಂದ ಚೌಕಿ ಪೂಜೆ , ಅಬ್ಬರ ತಾಳ, 8 ಗಂಟೆಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಿಳಾ ಘಟಕದ ಸದಸ್ಯರಿಂದ ಮಹಿಳಾ ಯಕ್ಷಗಾನ, 9:30ಕ್ಕೆ ‘ಪದ್ಯಾಣ ಗಣಪತಿ ಭಟ್’ ವೇದಿಕೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ಉದ್ಘಾಟನೆ ನಡೆಯಲಿದೆ.

ಬೆಳಗ್ಗೆ 10 ಗಂಟೆಯಿಂದ 2 ಗಂಟೆಯ ತನಕ ಟ್ರಸ್ಟಿನ ಸದಸ್ಯರಿಂದ ಹಾಗು ಯುವಭಾಗವತರಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಔಷಧ ವಿತರಣೆ, ಉಚಿತ ಕಣ್ಣು ಪರೀಕ್ಷೆ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.

ಬೆಳಗ್ಗೆ 11 ಗಂಟೆಯಿಂದ ಯುವಭಾಗವತರಿಂದ ‘ಗಾನವೈಭವ’ ಮಧ್ಯಾಹ್ನ 1 ಗಂಟೆಯಿಂದ  ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಸಿನಿಮಾ ನಟ ಕಿಚ್ಚಸುದೀಪ್ ಆಗಮಿಸಲಿದ್ದಾರೆ.
2:30 ರಿಂದ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ, ಸಂಜೆ 3:30ರಿಂದ ಪಾರಂಪರಿಕ ಯಕ್ಷಗಾನ- ಕಿರಾತಾರ್ಜುನ, ಸಂಜೆ 5:15 ರಿಂದ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

error: Content is protected !!