ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ 4 ವರ್ಷಗಳ ಪದವಿ ಕೋರ್ಸ್ ಪದ್ಧತಿಯನ್ನು ರದ್ದುಪಡಿಸಿರುವ ರಾಜ್ಯ ಸರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೂರು ವರ್ಷದ ಡಿಗ್ರಿ ಕೋರ್ಸ್ ಕಲಿಕೆಯನ್ನು ಅಳವಡಿಸುವಂತೆ ಆದೇಶ ಹೊರಡಿಸಿದೆ. ಈ ಹಿನ್ನಲೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳ ‘ಪದವಿ’ ಕಲಿಕೆ ಪದ್ಧತಿ ಮರು ಜಾರಿಗೆ ಬರಲಿದೆ.
ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸಿನಂತೆ ನಾಲ್ಕು ವರ್ಷಗಳ ಪದವಿ ಕೋರ್ಸ್ ರದ್ದು ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 6 ಸೆಮಿಸ್ಟರ್‌ಗಳಿರುವ ಮೂರು ವರ್ಷದ ಪದವಿ ತರಗತಿಗಳನ್ನು ಜಾರಿಗೆ ತರಲಾತ್ತಿದೆ. ರಾಜ್ಯ ಶಿಕ್ಷಣ ನೀತಿ ಆಯೋಗ ಎನ್ ಇ ಪಿಯ ಮುಖ್ಯಸ್ಥ ಪ್ರೊ.ಸುಖದೇವ್ ಥೋರಟ್ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ಡೀನ್‌ಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಣ ತಜ್ಞರು ಸೇರಿದಂತೆ ಹಲವರ ಜೊತೆ 3 ತಿಂಗಳುಗಳ ಕಾಲ ನಿರಂತರವಾಗಿ ಸಭೆ ನಡೆಸಿ, ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ 3 ವರ್ಷದ ಪದವಿ ಕೋರ್ಸ್ ಮರು ಜಾರಿಗೆ ತರುವಂತೆ ಶಿಫಾರಸು ಮಾಡಲಾಗಿದೆ ಎಂದಿದೆ.
ಈಗಾಗಲೇ ಎನ್‌ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶಾತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಕೋರ್ಸ್ ಪೂರ್ಣಗೊಳ್ಳುವವರೆಗೆ ಅಭ್ಯಾಸ ಮುಂದುವರಿಸಬಹುದು. ಆದರೆ ಈ ಶೈಕ್ಷಣಿಕ ವರ್ಷದಿಂದ ಪ್ರವೇಶ ಪಡೆಯುವವರಿಗೆ ಮೂರು ವರ್ಷದ ಕೋರ್ಸ್ ಅನ್ವಯವಾಗಲಿದೆ.