ಬೆಳ್ತಂಗಡಿ: ಹೆದ್ದಾರಿಯ ಬದಿಯಲ್ಲಿ ಕಾಮಗಾರಿಗಾಗಿ ತೆಗೆದಿದ್ದ ಹೊಂಡಕ್ಕೆ ಕಾರೊಂದು ಉರುಳಿ ಬಿದ್ದು ಪಲ್ಟಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಬೆಂಗಳೂರು ಮೂಲದ ಪ್ರಯಾಣಿಕರು ಸಂಚಾರಿಸುತಿದ್ದ ಕಾರು ಬೆಳ್ತಂಗಡಿ ನಗರದ ಹಳೇ ಕೋಟೆ ಬಳಿಯ ವಾಣಿ ಶಾಲಾ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತೆಗೆದಿದ್ದ ಚರಂಡಿಗೆ ಉರುಳಿ ಬಿದ್ದು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತಿದ್ದು ಈಗಾಗಲೇ ಅವ್ಯವಸ್ಥೆಯಿಂದ ಕೂಡಿದೆ. ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳನ್ನು ತೆಗೆದಿದ್ದು ಇದರ ಬಗ್ಗೆ ವಾಹನ ಸವಾರರಿಗೆ ಎಚ್ಚರಿಕೆಯ ಫಲಕವನ್ನಾಗಲಿ ಅಥವಾ ಸೂಚನಾ ಫಲಕ ಆಳವಡಿಸದೇ ಇರುವುದರಿಂದ ವಾಹನ ಸವಾರರು ಅಪಾಯಕ್ಕೆ ಸಿಲುಕುತಿದ್ದಾರೆ. ಒಂದು ವೇಳೆ ಮಳೆ ಪ್ರಾರಂಭವಾದರೆ ದೇವರೇ ಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.