ಮಂಗಳೂರು: 7 ವರ್ಷ ಸ್ಥಗಿತಗೊಂಡಿದ್ದ ಮಂಗಳೂರು – ಲಕ್ಷದ್ವೀಪದ ನಡುವಿನ ಹೈಸ್ಪೀಡ್ ಹಡಗು ಸಂಚಾರ ಮತ್ತೆ ಆರಂಭವಾಗಿದೆ.
ಮೇ.02ರಂದು ಬೆಳಗ್ಗೆ 08ಗಂಟೆಗೆ ಲಕ್ಷದ್ವೀಪದ ಕ್ಲಿಂಟನ್‍ನಿಂದ ಹೊರಟ ಹಡಗು ಸಂಜೆ 5 ಗಂಟೆಯ ವೇಳೆಗೆ ಮಂಗಳೂರು ಬಂದರಿಗೆ ಬಂದು ತಲುಪಿದೆ. ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಮಂಗಳೂರಿಗೆ ಆಗಮಿಸಿದ್ದಾರೆ.
ಹೈಸ್ಪೀಡ್ ಹಡಗು ಸಂಚಾರ ಮತ್ತೆ ಆರಂಭವಾದ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು ಸ್ಥಳೀಯ ವ್ಯಾಪಾರ, ವಹಿವಾಟು ವೃದ್ಧಿಗೊಳ್ಳಲಿದೆ. ಜನ ಸಂಚಾರಕ್ಕೂ ಭಾರೀ ಅನುಕೂಲವಾಗಲಿದೆ.
2020ರ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತಗೊಂಡ ನಂತರ ಇಲ್ಲಿನ ಹಡಗು ಕೇರಳದ ಕೊಚ್ಚಿ, ಕಲ್ಲಿಕೋಟೆಯತ್ತ ಸಂಚರಿಸಿ, ಅಲ್ಲಿಂದ ರೈಲಿನಲ್ಲಿ ಮಂಗಳೂರು ತಲುಪಬೇಕಾಗಿತ್ತು. ಆದರೆ ಈಗ ಹೈಸ್ಪೀಡ್ ಹಡಗು ಆರಂಭವಾಗಿ ಆ ಸಮಸ್ಯೆ ತಪ್ಪಿದಂತಾಗಿದೆ.
ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳ ಅವಧಿ ಅವಶ್ಯಕವಾಗಿದೆ. ಆದರೆ, ಪರೇಲಿ ಎಂಬ ಈ ಹೈಸ್ಪೀಡ್ ಹಡಗು ಕೇವಲ 7ತಾಸಿನಲ್ಲಿ ಮಂಗಳೂರು ತಲುಪಿದೆ.
ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಗಿದ್ದು, ಮಾಜಿ ಶಾಸಕ ಜೆ.ಆರ್.ಲೋಬೊ, ಟಿ.ಕೆ. ಸುಧೀರ್ ಮತ್ತಿತರರು ಜೊತೆಗಿದ್ದರು.
ಕೇರಳದ ಮಾಜಿ ಸಂಸದ ಹಮದುಲ್ಲಾ ಸಯ್ಯದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಇವರೆಲ್ಲರ ಪ್ರಯತ್ನದಿಂದ ಸ್ಥಗಿತಗೊಂಡಿದ್ದ ಹೈಸ್ಪೀಡ್ ಹಡಗು ಸಂಚಾರ ಸೇವೆ ಮತ್ತೆ ಆರಂಭವಾಗಲು ಸಾಧ್ಯವಾಗಿದೆ. ಕೋಲ್ಕತ್ತಾಗೆ ಹೋಗುವ ಹಡಗನ್ನು ಮಂಗಳೂರು ಮಾರ್ಗವಾಗಿ ಬರುವಂತೆ ಮಾಡಲಾಗಿದೆ.