ಮಂಗಳೂರು: ಹತ್ಯೆಗೆ ಹತ್ಯೆಯಿಂದಲೇ ಸೇಡು ತೀರಿಸಿಕೊಂಡ ಯುವಕರು: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು

ಮಂಗಳೂರು: 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ಮಂಚಿ ನಿವಾಸಿ ವಿಜೇತ್ ಕುಮಾರ್ (22), ಬಡಗ ಉಳಿಪ್ಪಾಡಿ ನಿವಾಸಿ ಕಿರಣ್ ಪೂಜಾರಿ (24), ವಾಮಂಜೂರು ತಿರುವೈಲ್ ನಿವಾಸಿ ಅನೀಶ್ (23), ಮಂಚಿಗುತ್ತು ನಿವಾಸಿ ಅಭಿಜಿತ್ (24) ಜೀವಾವದಿ ಶಿಕ್ಷೆಗೊಳಗಾದ ಅಪರಾಧಿಗಳು.

2015ರ ಆ.6ರಂದು ಮುಹಮ್ಮದ್ ಮುಸ್ತಫಾ ಅವರು ತನ್ನ ಅತ್ತೆಯನ್ನು ರಿಕ್ಷಾದಲ್ಲಿ ಬಂಟ್ವಾಳ ಆಸ್ಪತ್ರೆಗೆ ಬಿಟ್ಟು ರಾತ್ರಿ ಹಿಂತಿರುಗುತ್ತಿದ್ದರು. ಬಳಿಕ ಮೆಲ್ಕಾರ್ ಸಮೀಪ ನಾಸಿರ್ ತನ್ನ ಪತ್ನಿಯ ಜೊತೆ ರಿಕ್ಷಾವನ್ನೇರಿ ಮುಡಿಪು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ 2 ಬೈಕ್‌ನಲ್ಲಿ ನಾಲ್ವರು ಬಂದಿದ್ದು, ರಿಕ್ಷಾದವರಲ್ಲಿ ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ. ದಾರಿ ತೋರಿಸಿ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದಾಗ ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದರು. ರಾತ್ರಿ 10.45ರ ವೇಳೆ ಮುಡಿಪು ಮಾರ್ನಬೈಲು ಸಮೀಪದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪಿದಾಗ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದ್ದರು. ಮತ್ತೆ ದಾರಿ ಕೇಳುವ ನೆಪದಲ್ಲಿ ರಿಕ್ಷ ಬಳಿ ಹೋದ ಆರೋಪಿ ವಿಜೇತ್ ಕುಮಾರ್ ನಾಸಿರ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ, ತೀವ್ರ ಗಾಯಗೊಳಿಸಿದ್ದ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ, ಆ.7ರಂದು ಮೃತಪಟ್ಟಿದ್ದರು. ಬಳಿಕ ಈ ನಾಲ್ವರು ಆರೋಪಿಗಳು ರಕ್ತ ಕಲೆಗಳಿದ್ದ ಬಟ್ಟೆಯನ್ನು ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ್ದರು.

ಈ ಕೊಲೆಗೆ ಸೇಡು ಕಾರಣವಾಗಿತ್ತು. 2015 ಆ.5ರಂದು ಕೊಲ್ನಾಡ್ ಅಲಬೆ ಎಂಬಲ್ಲಿ ರಾತ್ರಿ ಸುಮಾರು 10.45ರ ವೇಳೆಗೆ ಆರೋಪಿಗಳಾಗಿರುವ ವಿಜೇತ್ ಕುಮಾರ್ ಮತ್ತು ಅಭಿಜಿತ್ ಮೇಲೆ ಐವರು ಯುವಕರು ಹಲ್ಲೆ ನಡೆಸಿದ್ದರು. ಮರುದಿನ ರಾತ್ರಿ ದುರುದ್ದೇಶದಿಂದ ಕಿರಣ್ ಮತ್ತು ಅನೀಶ್‌ರನ್ನು ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕರೆಸಿಕೊಂಡು ನಾಸಿರ್ ಕೊಲೆ ಮಾಡಿದ್ದ. ಈ ಕೊಲೆಯ ಸೇಡು ಎಂಬಂತೆ ಸಂಬಂಧಿಸಿ ನಾಸಿರ್ ನನ್ನು ಕೊಲೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣಕ್ಕೆಪೊಲೀಸ್ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಒಟ್ಟು 29 ಸಾಕ್ಷಿದಾರರ ವಿಚಾರಣೆ ನಡೆಸಲಾಗಿದೆ. 40 ದಾಖಲೆಗಳನ್ನು ಹಾಜರುಪಡಿಸಿ ವಿಚಾರಣೆ ನಡೆದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್. ತೀರ್ಪು ಪ್ರಕಟಿಸಿದ್ದಾರೆ.

ನಾಲ್ವರು ಆರೋಪಿಗಳಿಗೆ ಕಲಂ 302 ಹಾಗೂ 120 (ಬಿ) ಅನ್ವಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದಲ್ಲಿ 1 ವರ್ಷ ಸಾದಾ ಸಜೆ, ಕಲಂ 307 ಹಾಗೂ 120 (ಬಿ) ಅಡಿ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ವಿಧಿಸಿ ಆದೇಶಿಸಲಾಗಿದೆ. ದಂಡದ ಮೊತ್ತ 1.20 ಲಕ್ಷ ರೂ.ಗಳನ್ನು ಮೃತ ನಾಸಿರ್ ಪತ್ನಿ ರಮ್ಲತ್ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತರ ಪತ್ನಿ ಮತ್ತು ಫಿರ್ಯಾದಿದಾರ ಮುಸ್ತಫಾ ಅವರಿಗೆ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

error: Content is protected !!