ಮತದಾನ ಮಾಡುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಪುತ್ತೂರು ವಿಧಾನಸಭಾ ಕ್ಷೇತ್ರ-206ರ ಮತಗಟ್ಟೆ ಸಂಖ್ಯೆ 147ರಲ್ಲಿ ಘಟನೆ: ಸೂಕ್ತ ಕಾನೂನು ಕ್ರಮ ಕೈಗೊಂಡ ದ.ಕ ಜಿಲ್ಲಾಧಿಕಾರಿ

ಮಂಗಳೂರು: ಮತದಾನ ಬಹಿರಂಗಪಡಿಸುವುದು ಕಾನೂನುಬಾಹಿರ. ಹೀಗಾಗಿ ಹಿಂದಿನ ಕಾಲದಲ್ಲಿ ಹಿರಿಯರು ಮತದಾನ ಮಾಡಿ ಬಂದ ಮೇಲೆ ಯಾವ ಪಕ್ಷಕ್ಕೆ ಮತ ಹಾಕಿದ್ರು ಎಂಬುವುದನ್ನು ಗೌಪ್ಯವಾಗಿಡುತ್ತಿದ್ದರು. ಯಾರಾದ್ರೂ ಯಾವುದಕ್ಕೆ ಓಟ್ ಮಾಡಿದ್ರಿ ಅಂತ ಕೇಳಿದ್ರೂ ಹೇಳುತ್ತಿರಲಿಲ್ಲ. ಆದರೆ ಈಗ ಓಟ್ ಮಾಡುವ ಫೋಟೋ, ಯಾವ ಪಕ್ಷ, ಯಾವುದಕ್ಕೆ ಮತ ಎಲ್ಲವನ್ನೂ ಒಬ್ಬರಿಂದೊಬ್ಬರು ಹಂಚಿಕೊಳ್ಳುತ್ತಾರೆ. ಸಂವಿಧಾನದ ಪ್ರಕಾರ ಮತದಾನ ಬಹಿರಂಗಪಡಿಸುವುದು ಕಾನೂನುಬಾಹಿರ. ಹೀಗಾಗಿ ಈ ಬಾರಿ ಮತಗಟ್ಟೆಯ ಒಳಗೆ ಮೊಬೈಲ್ ಕೊಂಡೊಯ್ಯದಂತೆ ಕಟ್ಟು ನಿಟ್ಟಿನ ನಿಯಯ ಜಾರಿ ಮಾಡಲಾಗಿತ್ತು. ಆದಾಗ್ಯೂ ಪುತ್ತೂರಿನಲ್ಲಿ ಮತದಾರನೊಬ್ಬ ಮತದಾನ ಮಾಡುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

ಏ.26ರಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪುತ್ತೂರು ತಾಲೂಕಿನ ಮತಗಟ್ಟೆ ಸಂಖ್ಯೆ 147ರಲ್ಲಿ ಪುತ್ತೂರು ತಾಲೂಕಿನ ನಿವಾಸಿಯೊಬ್ಬರು ಮತದಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಬಳಿಕ ಆ ಪೋಟೋವನ್ನು ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ಲಾಯಿಂಗ್ ಸ್ಕ್ವಾಡ್ -2 ರ ಉಸ್ತುವಾರಿ ಅಧಿಕಾರಿ ನೀಡಿದ ದೂರಿನ ಮೇರೆಗೆ, ಕಲಂ:171 (ಎಫ್), 188 ಭಾರತೀಯ ದಂಡ ಸಂಹಿತೆ ಮತ್ತು ಕಲಂ: 123 ಪ್ರಜಾಪ್ರತಿನಿಧಿ ಕಾಯ್ದೆ 1951 ಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಹಿಲನ್ ಅವರು ತಿಳಿಸಿದ್ದಾರೆ.

error: Content is protected !!