ಲೋಕ ಸಮರಕ್ಕೆ ಡೇಟ್ ಫಿಕ್ಸ್: ದಿನಾಂಕ ಘೋಷಿಸಿದ ಚುನಾವಣಾ ಆಯೋಗ:ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ

ದೆಹಲಿ: ದೇಶದಲ್ಲಿ ಈಗ ಚುನಾವಣೆಯದ್ದೇ ಚರ್ಚೆ. ಪಕ್ಷಗಳಂತೂ ಅಭ್ಯರ್ಥಿಗಳ ಆಯ್ಕೆ, ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಭರ್ಜರಿ ತಯಾರಿಯಲ್ಲಿದೆ. ಈ ಮಧ್ಯೆ ಇಂದು ಭಾರತೀಯ ಚುನಾವಣಾ ಆಯೋಗವು ಲೋಕಸಭೆ 2024ರ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ.  ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 26ರಂದು ಮತದಾನ ನಡೆಯಲಿದೆ.  ಕರ್ನಾಟಕದಲ್ಲಿ ಎರಡು ಹಂತದಲ್ಲಿ ಅಂದರೆ ಏಪ್ರಿಲ್ 26 ಹಾಗೂ ಮೇ 07ರಂದು ಮತದಾನ ನಡೆಯಲಿದೆ. 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇನ್ನುಳಿದ 14 ಕ್ಷೇತ್ರಗಳಿಗೆ 2 ನೇ ಹಂತದಲ್ಲಿ ಮತದಾನ ನಡೆಯಲಿದೆ.

ಮೊದಲ ಹಂತದ ಮತದಾನ ಕ್ಷೇತ್ರಗಳ ಪಟ್ಟಿ

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ

2ನೇ ಹಂತದ ಮತದಾನ ಕ್ಷೇತ್ರಗಳ ಪಟ್ಟಿ

ಬೀದರ್, ಕಲಬುರುಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯಪುರ,ಬಾಗಲಕೊಟೆ, ಚಿಕ್ಕೋಡಿ, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ, ಹಾವೇರಿ-ಗದಗ, ದಾವಣಗೆರೆ, ಶಿವಮೊಗ್ಗ.

ದೇಶಾದ್ಯಂತ 97 ಕೋಟಿ ಮತದಾರರಿದ್ದು, 19.74 ಕೋಟಿ ಯುವ ಮತದಾರರು ಮತಚಲಾಯಿಸಲಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರಿದ್ದು , 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇ.40ಕ್ಕೂ ಹೆಚ್ಚು ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. 2.18 ಲಕ್ಷ ಶತಾಯುಷಿಗಳು ಮತದಾನ ಮಾಡಲಿದ್ದು, 85 ವರ್ಷ ಮೇಲ್ಪಟ್ಟವರಿಗೆ ಮತಗಟ್ಟೆಗೆ ಬರಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

10 ಲಕ್ಷದ 5 ಸಾವಿರ ಮತಗಟ್ಟೆಗಳ ಸ್ಥಾಪನೆಯಾಗಿದ್ದು, 1.5 ಕೋಟಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳ ನಿಯೋಜನೆಯಾಗಲಿದೆ. ಮತದಾನಕ್ಕೆ 55 ಲಕ್ಷ ಇವಿಎಂ ಯಂತ್ರಗಳ ವ್ಯವಸ್ಥೆಯಾಗಿದೆ ಎಂದರು.

ಪಕ್ಷಗಳು ಖಡ್ಡಾಯವಾಗಿ ನೀತಿ ಸಂಹಿತಿಯನ್ನು ಪಾಲಿಸಬೇಕು. ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿದರೆ, ಅಕ್ರಮ ಹಣ ಸಾಗಿಸಿದರೆ, ಆಮಿಷ ಒಡ್ಡಿದರೆ, ಕುಕ್ಕರ್, ಮದ್ಯ ನೀಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ದಿನದ 24 ಗಂಟೆಯೂ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ. ಎಲ್ಲಾ ಕಡೆ ಚೆಕ್ ಪೋಸ್ಟ್ ನಿರ್ಮಿಸಿ, ಡ್ರೋನ್ ಮೂಲಕ ಪೊಲೀಸ್ ಕಣ್ಗಾವಲು ಇರಲಿದೆ. ರೈಲ್ವೇ ಸ್ಟೇಷನ್, ಏರ್ ಪೋರ್ಟ್‍ಗಳಲ್ಲೂ ತಪಾಸಣೆ ಇದ್ದು, ಸೂರ್ಯಾಸ್ತದ ಬಳಿಕ ಎಟಿಎಂ ವಾಹನ ಸಂಚರಿಸುವಂತಿಲ್ಲ ಎಂದಿದ್ದಾರೆ.

ಚುನಾವಣಾ ಪ್ರಚಾರದ ಷರತ್ತುಗಳು

ಸುಳ್ಳುಸುದ್ದಿ ಹಬ್ಬುವವರ ವಿರುದ್ಧ ಕ್ರಮ, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣು , ದ್ವೇಷ ಭಾಷಣ ಮಾಡುವ ಹಾಗಿಲ್ಲ, ಆನ್ ಲೈನ್ ವಹಿವಾಟಿನ ಮೇಲೆ ಕಣ್ಣು, ವೈಯುಕ್ತಿಕ ಟೀಕೆ ಮಾಡುವಂತಿಲ್ಲ. ಮತದಾರರನ್ನು ಪ್ರಚೋದಿಸುವಂತಿಲ್ಲ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ, 2100 ವೀಕ್ಷಕರನ್ನು ನೇಮಕ.

7 ಹಂತಗಳಲ್ಲಿ ಲೋಕಸಭೆ ಚುನಾವಣೆ
ಮೊದಲ ಹಂತದ ಚುನಾವಣೆ ಏಪ್ರಿಲ್ 19
2ನೇ ಹಂತ ಏಪ್ರಿಲ್ 26
ಮೂರನೇ ಹಂತ ಮೇ 07
ನಾಲ್ಕನೇ ಹಂತ ಮೇ 13
5ನೇ ಹಂತ ಮೇ 20
6ನೇ ಹಂತ ಮೇ 25
7ನೇ ಹಂತ ಜೂನ್ 1ರಂದು ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟ

error: Content is protected !!