ಕೇಂದ್ರ ನೂತನ ಚುನಾವಣಾ ಆಯುಕ್ತರ ನೇಮಕ: ಎಸ್.ಎಸ್. ಸಂಧು ಮತ್ತು ಜ್ಞಾನೇಶ್ ಕುಮಾರ್ ಆಯ್ಕೆ:

 

 

ದೆಹಲಿ: ಕೇಂದ್ರ ಚುನಾವಣಾ ಆಯುಕ್ತರನ್ನಾಗಿ ಎಸ್‌.ಎಸ್.ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಇವರಿಬ್ಬರನ್ನು ಚುನಾವಣಾ ಆಯುಕ್ತರೆಂದು ಆಯ್ಕೆ ಮಾಡಿದ್ದು, ಇಬ್ಬರೂ ಕೂಡ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ.

2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಇದಕ್ಕೂ ಮೊದಲು ನಡೆದ ಅನಿರೀಕ್ಷಿತ ಬೆಳವಣಿಗೆಗಳಲ್ಲಿ ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯೆಲ್ ಫೆ 8ರಂದು ತಮ್ಮ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದರು. ಇವರ ಅಧಿಕಾರಾವಧಿಯು 2027ರ ಡಿಸೆಂಬರ್ 5ರವರೆಗೆ ಇತ್ತು. ಮುಂದಿನ ವರ್ಷ ಫೆಬ್ರವರಿಯಲ್ಲಿ ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾದ ನಂತರ ಅರುಣ್ ಗೋಯೆಲ್ ಈ ಹುದ್ದೆಯನ್ನು ಅಲಂಕರಿಸಬೇಕಿತ್ತು.ಮತ್ತೊಬ್ಬ ಚುನಾವಣಾ ಆಯುಕ್ತರಾಗಿದ್ದ ಅನುಪ್ ಚಂದ್ರ ಪಾಂಡೆ ಫೆಬ್ರವರಿ 14ರಂದು ನಿವೃತ್ತಿ ಹೊಂದಿದ್ದರು. ಹೀಗಾಗಿ ಚುನಾವಣಾ ಆಯೋಗದಲ್ಲಿ ಈ ಪ್ರಮುಖ ಹುದ್ದೆಗಳು ಖಾಲಿಯಾಗಿದ್ದವು. ಹೊಸ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಇಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದೀಯ ನಾಯಕರಾದ ಅಧೀರ್ ರಂಜನ್ ಚೌಧರಿ ಕೂಡ ಪಾಲ್ಗೊಂಡಿದ್ದರು. ಹೊಸ ಚುನಾವಣಾ ಆಯುಕ್ತರ ಹುದ್ದೆಗೆ ಎಸ್‌.ಎಸ್.ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಸಮಿತಿ ಶಿಫಾರಸು ಮಾಡಿತ್ತು. ಅಂತೆಯೇ, ಕಾನೂನು ಸಚಿವಾಲಯವು ಇಬ್ಬರು ಅಧಿಕಾರಿಗಳ ನೇಮಕದ ಅಧಿಸೂಚನೆ ಹೊರಡಿಸಿದೆ.

error: Content is protected !!