ನಾಳ, ನ್ಯಾಯತರ್ಪು ಪ್ರದೇಶದಲ್ಲಿ ಒಂಟಿಸಲಗ ದಾಳಿ: ಕೃಷಿ ಹಾನಿ, ಆತಂಕದಲ್ಲಿ ಕೃಷಿಕರು: ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ:

 

 

 

ಬೆಳ್ತಂಗಡಿ :ಕಳೆದ ಕೆಲವು ದಿನಗಳಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ಆನೆ ದಾಳಿಯಿಂದ ಕೃಷಿ ಹಾನಿಯುಂಟಾಗಿದ್ದು ಕೃಷಿಕರು ಆತಂಕದಲ್ಲಿದ್ದಾರೆ.ಕಳೆದ ರಾತ್ರಿ ನ್ಯಾಯತರ್ಪು ಗ್ರಾಮದ ಕೇಲ್ದಡ್ಕ, ಒಂಜಾರೆ ಮುದ್ದುಂಜ,ಹಾಕೋಟೆ,ಕಲಾಯಿತೊಟ್ಟು,ಕಜೆ,ಕೆಳಗಿನಬೆಟ್ಟು ಮತ್ತು ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ  ಒಂಟಿ ಸಲಗ ನುಗ್ಗಿದ್ದು ಬಾಳೆ ಕೃಷಿ ನಾಶವಾಗಿದೆ. ಗ್ರಾಮಸ್ಥರು ತಡ ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ತಕ್ಷಣ  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

ಸ್ಥಳೀಯರ ಸಹಕಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ ಆನೆಯ ಸುಳಿವು ಸಿಗಲಿಲ್ಲ ಅದರೆ ಕೇಲ್ದಡ್ಕ ಉಮೇಶ್ ರವರ ಮನೆಯ ದನದ ಹಟ್ಟಿಯ ಪಕ್ಕದಲ್ಲಿ ಆನೆ ಬರುವುದನ್ನು ಗಮನಿಸಿದ ಸಾಕು ನಾಯಿ ಕೂಗಿದಾಗ ಒಂಟಿ ಸಲಗ ಘೂಳಿಡುವ  ಶಬ್ದವು ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದೆ.

 

ಹಾಗೂ ಸ್ವಲ್ಪ ಸಮಯದ ನಂತರ ಪಕ್ಕದ ಮನೆ ನಿವಾಸಿ ರಮಾನಂದ ಪೂಜಾರಿಯವರ ಮನೆಯಂಗಳದಲ್ಲಿ ಕಾಣಿಸಿಕೊಂಡಿದ್ದು,ವಸಂತ ಕುಮಾರ್ ಮತ್ತು ಜನಾರ್ದನ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡಗಳನ್ನು ನಾಶಪಡಿಸಿರುವುದು ಕಂಡುಬಂದಿದೆ.

 

 

 

ಕಲಾಯಿತೊಟ್ಟು ಗಿರಿಯಪ್ಪ ಗೌಡರ ಮನೆ ಅಂಗಳ ಪಕ್ಕದಲ್ಲಿ ಕಾಣಿಸಿಕೊಂಡು ನಂತರ ಕಜೆ ಕೆಳಗಿನ ಬೆಟ್ಟು ಶ್ರೀಧರ ಪೂಜಾರಿ ಯವರ ಮನೆಯ ದೈವದ ಕಟ್ಟೆ ಪಕ್ಕದಲ್ಲಿರುವ ಕಬ್ಬು ಗಿಡಗಳನ್ನು ತಿಂದು ಹಾಳು ಕೆಡವಿದೆ. ಹಾಗೂ ನಸುಕಿನಲ್ಲಿ ಪಾಂಡಿಬೆಟ್ಟು ವಿಠ್ಠಲ ಗೌಡರ ತೋಟದ ಬಾಳೆ ಗಿಡಗಳನ್ನು ಮುರಿದು ಹಾಕಿದ ದೃಶ್ಯ ಕಂಡು ಬಂದಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ.ಆನೆ ಹಾವಳಿಯಿಂದಾಗಿ
ರಾತ್ರಿ ವೇಳೆಯಲ್ಲಿ ಕೃಷಿಗೆ ನೀರು ಹಾಯಿಸಲು ತೋಟಕ್ಕೆ ಹೋಗಲು ಭಯಪಡುವಂತಾಗಿದೆ ಎಂದು ನೊಂದ ಕೃಷಿಕರು ಆತಂಕ ವ್ಯಕ್ತ ಪಡಿಸುತಿದ್ದಾರೆ.

 

 

ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಮಡಂತ್ಯಾರು ಉಪವಲಯ ಅರಣ್ಯಾಧಿಕಾರಿ ರಾಜಶೇಖರ, ಗಸ್ತು ಅರಣ್ಯ ರಕ್ಷಕರಾದ ಸತೀಶ್ ಮತ್ತು ಅಖಿಲೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಳೆದ 2 ದಿನಗಳಿಂದ ಕೊಯ್ಯೂರು ಗ್ರಾಮದ ಕೆಲವು ಕಡೆಗಳಲ್ಲಿ ರಾತ್ರಿ 2 ಆನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದ ಬಗ್ಗೆ ಕೃಷಿಕರು ಮಾಹಿತಿ ನೀಡಿದ್ದಾರೆ.

error: Content is protected !!