ಬೆಳ್ತಂಗಡಿ: ಶಿವರಾತ್ರಿಯ ದಿನ ರಾತ್ರಿಯ ವೇಳೆ ರಸ್ತೆಯಲ್ಲಿ ದಾಂಧಲೆ ನಡೆಸುತ್ತಾ ಬಾಟಲಿಗಳನ್ನು, ರಸ್ತೆಯಲ್ಲಿ ಒಡೆದು ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಯುವಕರ ತಂಡವೊಂದು ದೌರ್ಜನ್ಯವೆಸಗಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಪೆರಲ್ದಾರಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಯ ಬಗ್ಗೆ ಮೂವರ ವಿರುದ್ದ ಹಾಗೂ ಇತರ ಅಪರಿಚಿತರ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್, ಸುರೇಶ್, ಅರುಣ್ ಹಾಗೂ ಇತರ ಹತ್ತ ಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಎ.ಎಸ್.ಐ ರಾಮಯ್ಯ ಅವರು ಯುವಕರ ತಂಡ ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ಧಾರೆ. ತಡ ರಾತ್ರಿ ವೇಳೆ ರಸ್ತೆಯಲ್ಲಿದ್ದ ಯುವಕರನ್ನು ರಸ್ತೆಯಲ್ಲಿ ಸೋಡಾ ಬಾಟ್ಲಿಗಳನ್ನು ಒಡೆದು ಹಾಕಿರುವ ಬಗ್ಗೆ ರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ತಂಡ ಅವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ರಾಮಯ್ಯ ಅವರು ನೀಡಿರುವ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಮಯ್ಯ ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಪೊಲೀಸರು ಐವರನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.